ಆಸ್ಪತ್ರೆಗಳಿಗೆ ವಿದ್ಯುತ್ ವ್ಯತ್ಯಯ ಮಾಡಬೇಡಿ: ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು: ವಿದ್ಯುತ್ ಕ್ಷೇತ್ರದಲ್ಲಿ ಸಾವಲಂಬಿ ಆಗುವುದರ ಜೊತೆಗೆ ಸಮರ್ಥವಾಗಿ ವಿದ್ಯುತ್ ನಿರ್ವಹಣಾ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಇದೇ ಮೊದಲ ಬಾರಿಗೆ ವಿಧಾನ ಸೌಧದಲ್ಲಿ ಸಿಎಂ ಅವರು ನಡೆಸಿದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.
ವಿದ್ಯುತ್ ಉತ್ಪಾದನೆ ಮತ್ತು ನಿರ್ವಹಣೆ ಇನ್ನು ಬಹಳ ವ್ಯವಸ್ಥಿತವಾಗಿ ಮಾಡಬೇಕು. ಮಾರುಕಟ್ಟೆ ಸ್ಥಿತಿಗತಿಯನ್ನು ಆಧರಿಸಿ ಹೆಚ್ಚಿನ ದರಕ್ಕೆ ವಿದ್ಯುತ್ತನ್ನು ಮಾರಾಟ ಮಾಡುವಂತಾಗಬೇಕು. ಕರ್ನಾಟಕ ವಿದ್ಯುತ್ ನಿಗಮದಿಂದ ವಿದ್ಯುತ್ ಉತ್ಪಾದನೆ ಅತ್ಯಂತ ದಕ್ಷತೆಯಿಂದ ಆಗಬೇಕು. ಜಲ ಮತ್ತು ವಿದ್ಯುತ್ ಘಟಕಗಳು ಅತಿ ಹೆಚ್ಚು ಕಾರ್ಯ ಕ್ಷಮತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಗಂಗಾ-ಕಲ್ಯಾಣ ಕೊಳವೆ ಬಾವಿಗಳಿಗೆ ಕೂಡಲೇ ವಿದ್ಯುತ್
ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಿಸಲಾಗಿರುವ ಬೋರ್ ವೆಲ್ ಗಳಿಗೆ ಯಾವುದೇ ರೀತಿಯ ತಡ ಮಾಡದೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಕೋವಿಡ್ ಸಂದರ್ಭದಲ್ಲಿ ವಿಶೇಷವಾಗಿ ಆಸ್ಪತ್ರೆಗಳಿಗೆ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ನಿರ್ದೇಶನ ನೀಡಿದರು.
ಗಂಗಾ ಕಲ್ಯಾಣ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಎಲ್ಲಾ ಅಭಿವೃದ್ಧಿ ನಿಗಮಗಳು ಸೇರಿದಂತೆ ಒಟ್ಟು 18569 ಕೊಳವೆಬಾವಿಗಳ ವಿದ್ಯುದೀಕರಣಗೊಳಿಸುವ ಗುರಿ ಇದೆ. ಇದಕ್ಕಾಗಿ ಪ್ರತಿ ಪಂಪ್ ಸೆಟ್ ವಿದ್ಯುದೀಕರಣಕ್ಕೆ ಬಿಡುಗಡೆ ಮಾಡುವ 50 ಸಾವಿರ ರೂ.ಗಳ ವೆಚ್ಚವನ್ನು 1.2 ಲಕ್ಷಕ್ಕೆ ಹೆಚ್ಚಿಸುವ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಹಳ್ಳಿಗಳಿಗೆ ವಿದ್ಯುತ್ ಪೂರೈಕೆ ಯಲ್ಲಿ ತಾರತಮ್ಯ
ರಾಜ್ಯದ 15 ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ 7 ಗಂಟೆಗಳ ವಿದ್ಯುತ್ ಪೂರೈಕೆಯಾಗುತ್ತಿದ್ದು, ಉಳಿದ ಜಿಲ್ಲೆಗಳಲ್ಲಿ 5 ಗಂಟೆ ವಿದ್ಯುತ್ ಪೂರೈಕೆಯೂ ಸರಿಯಾಗಿ ಆಗುತ್ತಿಲ್ಲ. ಈ ಅಸಮಾನತೆಯನ್ನು ಹೋಗಲಾಡಿಸಲು ನೀಲನಕ್ಷೆಯನ್ನು ಸಿದ್ಧಪಡಿಸಿ ಕಾಲಮಿತಿಯಲ್ಲಿ ಯೋಜನಾಬದ್ಧವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.
ನವೀಕೃತ ಇಂಧನಕ್ಕೆ ಆದ್ಯತೆ ಇರಲಿ
ವಿದ್ಯುತ್ ಸೋರಿಕೆಯನ್ನು ತಡೆಗಟ್ಟಿ ಒಟ್ಟಾರೆ ಇಂಧನ ವ್ಯವಸ್ಥೆಯ ಸುಧಾರಣೆಗೆ ಒತ್ತು ನೀಡಬೇಕು. ರಾಜ್ಯದಲ್ಲಿ ನವೀಕೃತ ಮೂಲಗಳ ಸ್ಥಾಪಿತ ಸಾಮರ್ಥ್ಯ 15184.13 ಮೆ. ವ್ಯಾಟ್.ಗಳಿದ್ದು ದೇಶದಲ್ಲಿಯೇ ಕರ್ನಾಟಕ ಮುಂಚೂಣಿಯಲ್ಲಿದೆ. ಭವಿಷ್ಯದ ದೃಷ್ಟಿಯಿಂದ ನವೀಕೃತ ಇಂಧನಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
