Breaking Newsರಾಮನಗರ

ನರೇಗಾ ಯೋಜನೆ ಅನುಷ್ಠಾನದಲ್ಲಿ ಉದಾಸೀನ ತೋರಿದರೆ ಕ್ರಮ: ಡಿ.ಕೆ. ಸುರೇಶ್‌

ಚನ್ನಪಟ್ಟಣ: ನರೇಗಾ ಯೋಜನೆಯ ಅನುಷ್ಠಾನ ಸೇರಿದಂತೆ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಪಿಡಿಒಗಳು ಉದಾಸೀನ ಪ್ರವೃತ್ತಿ ತೋರುತ್ತಿದ್ದು, ಇದನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಂಸದ ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದರು.

ತಾಪಂ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಕಲ್ಪಿಸುವ ಉದೇಶದಿಂದ ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿದೆಯಾದರೂ ಪಿಡಿಒಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿಲ್ಲ. ಅಧಿಕಾರಿಗಳು ಇನ್ನು ಮುಂದಾದರೂ ಎಚ್ಚತ್ತುಕೊಂಡು ಕಾರ್ಯ ನಿರ್ವಹಿಸದಿದ್ದಲ್ಲಿ ಮುಂದೆ ಶಿಸ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದ್ದು, ಇದು ಅಧಿಕಾರಿಗಳಿಗೆ ನೀಡುತ್ತಿರುವ ಕೊನೆಯ ಎಚ್ಚರಿಕೆಯಾಗಿದೆ ಎಂದು ತಿಳಿಸಿದರು.

50 ಕಾಮಗಾರಿ ಕಡ್ಡಾಯ: ಪ್ರತಿ ಗ್ರಾಮದ ವ್ಯಾಪ್ತಿಯಲ್ಲಿ 50 ಕಾಮಗಾರಿಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಜಾಬ್ ಕಾರ್ಡ್ ಹೊಂದಿರುವವರಿಗೆ ನೂರು ದಿನಗಳ ಕೆಲಸವನ್ನು ಕಡ್ಡಾಯವಾಗಿ ನೀಡಿ. ಗ್ರಾಪಂ ಸದಸ್ಯರು, ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಗಳನ್ನು ಕೈಗೊಳ್ಳಿ ಎಂದು ಸಲಹೆ ನೀಡಿದರು.

ನರೇಗಾ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಿ. ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ, ಶಾಲಾ ಆವರಣದಲ್ಲಿ ಮಕ್ಕಳ ಆಟದ ಮೈದಾನ ಅಭಿವೃದ್ಧಿ, ಅಗತ್ಯವಿದ್ದಲ್ಲಿ ಕೈತೋಟ ನಿರ್ಮಾಣ ಸೇರಿದಂತೆ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಿ. ಸಮುದಾಯ ಕಾಮಗಾರಿಯಡಿಯಲ್ಲಿ ಶಾಲೆ, ಸ್ಮಶಾನ, ಕೆರೆಗಳ ಅಭಿವೃದ್ಧಿ ಸೇರಿದಂತೆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ಕಿವಿ ಮಾತು ಹೇಳಿದ್ರು.

ಸಮುದಾಯದ ಕಾಮಗಾರಿಗಳಂತೆ ಕೊಟ್ಟಿಗೆ ನಿರ್ಮಾಣ, ಕೃಷಿ ಮತ್ತು ತೋಟಗಾರಿಕಾ ಬೆಳಗಳಿಗೆ ಉತ್ತೇಜನ ನೀಡುವ ವೈಯಕ್ತಿಕ ಕಾಮಗಾರಿಗಳಿಗೂ ಅವಕಾಶ ಮಾಡಿಕೊಡಿ. ಈ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಿ, ಮಾನವ ದಿನಗಳನ್ನು ಹೆಚ್ಚುಮಾಡಿ, ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ನರೇಗಾ ಮೂಲಕ ಹಚ್ಚಿನ ಅನುಕೂಲವಾಗುವಂತೆ ನೋಡಿಕೊಳ್ಳಿ ಎಂದು ಅವರು ತಿಳಿಸಿದರು.

ಪ್ರಯೋಜನವಿಲ್ಲದ ಜಾಬ್‌ಕಾರ್ಡ್ ರದ್ದುಪಡಿಸಿ: ತಾಲೂಕಿನಲ್ಲಿ ಶೇ.೬೫ ರಷ್ಟು ಜಾಬ್‌ಕಾರ್ಡ್ಗಳು ಮಾತ್ರ ಬಳಕೆಯಾಗಿವೆ. ಉಳಿದ ಕಾರ್ಡ್ಗಳು ಬಳಕೆಯಾಗದೆ ಹಾಗೇ ಉಳಿದಿವೆ. ಉಪಯೋಗವಿಲ್ಲದ ಜಾಬ್‌ಕಾರ್ಡ್ಗಳನ್ನು ರದ್ದುಗೊಳಿಸಿ. ಹೊಸದಾಗಿ ಅವಶ್ಯಕತೆ ಇದ್ದವರಿಗೆ ಜಾಬ್‌ಕಾರ್ಡ್ ನೀಡಿ. ಹೆಚ್ಚು ಮಾನವ ದಿನಗಳು ಸೃಷ್ಟಿಯಾಗಿ ಹೆಚ್ಚು ಹೆಚ್ಚು ಕಾಮಗಾರಿಗಳು ನಡೆಯುವಂತೆ ನೋಡಿಕೊಳ್ಳಿ ಎಂದರು.

ಸಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮುನ್ನಾ, ಈ ಕಾಮಗಾರಿಗಳಿಂದ ಆಗುವ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಅರಿವಿರಲಿ. ಸಂಪರ್ಕ ರಸ್ತೆಗಳ ಅಭಿವೃದ್ಧಿಗೂ ನರೇಗಾ ಯೋಜನೆಯ ಹಣವನ್ನು ಬಳಕೆ ಮಾಡಿಕೊಳ್ಳಿ. ಇದರೊಂದಿಗೆ ಕೆರೆಗಳ ಒತ್ತುವರಿಯಾಗಿದ್ದರೆ ಸಿಇಓ ಅವರ ಗಮನಕ್ಕೆ ತಂದು ಕೆರೆಗಳನ್ನು ತೆರವು ಗೊಳಿಸಲು ಮುಂದಾಗಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳೂ ನನಗೆ ಒಂದೇ, ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೂ ಸಮಾನ ಅವಕಾಶ ನೀಡುತ್ತೇನೆ. ಯಾವುದೇ ತಾರತಮ್ಯ ಮಾಡುವುದಿಲ್ಲ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿ ಅಭಿವೃದ್ಧಿಗೆ ಸಹಕರಿಸಿ ಎಂದರು.

ತಾಲೂಕಿನ ೧೮೭ ಗ್ರಾಮಗಳಲ್ಲಿ ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಜಲಜೀವ ಮಿಷನ್ ಕಾಮಗಾರಿ ಈಗಾಗಲೇ ಆರಂಭ ಗೊಂಡಿದ್ದು, ೧೧೪ ಗ್ರಾಮಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಬಾಕಿ ಉಳಿದಿರುವ ಗ್ರಾಮಗಳಲ್ಲಿ ಕಾಮಗಾರಿ ತ್ವರಿತವಾಗಿ ನಡೆಯುವಂತೆ ಕ್ರಮ ಕೈಗೊಳ್ಳಿ, ಕಾಮಗಾರಿ ವಿಳಂಭ ವಾಗುತ್ತಿರುವುದಕ್ಕೆ ಸಕಾರಣಗಳನ್ನು ಗುರುತಿಸಿ ಸಮಸ್ಯೆಯನ್ನು ಸರಿಪಡಿಸಿ, ಕಾಮಗಾರಿ ಆರಂಭ ವಾಗುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಪಂ ಸಿಇಓ ಇಕ್ರಂ, ತಹಸೀಲ್ದಾರ್ ನಾಗೇಶ್, ತಾಪಂ ಇಓ ಚಂದ್ರು ಉಪಸ್ಥಿತರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button