ಹೈಕಮಾಂಡ್ ಜತೆಗೆ ಚರ್ಚಸಿ ಶೀಘ್ರ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ

ಬೆಂಗಳೂರು : ಪಕ್ಷವರಿಷ್ಠರೊಂದಿಗೆ ಚರ್ಚಿಸಿ ಶೀಘ್ರ ಸಂಪುಟ ರಚಿಸಲಾಗುವುದು ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೊದಲ ಹಂತದಲ್ಲಿ ಪೂರ್ಣಪ್ರಮಾಣದ ಬದಲು ಭಾಗಶಃವಾಗಿ ಸಂಪುಟ ರಚನೆಯಾಗಲಿದೆ ಎಂದು ತಿಳಿದು ಬಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ರಚನೆ ಕುರಿತು ಚರ್ಚಿಸಲು ಸೋಮವಾರದೊಳಗೆ ಪಕ್ಷ ವರಿಷ್ಠರಿಂದ ತಮಗೆ ಕರೆ ಬರಬಹುದು. ತಕ್ಷಣವೇ ತಾವು ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸಿದ ನಂತರ ಹೊಸ ಸಂಪುಟ ರಚಿಸಲು ಅಣಿಯಾಗುತ್ತೇನೆ ಎಂದರು.
ಜಾತಿ, ಪ್ರದೇಶ ಮತ್ತಿತರ ವಿಷಯಗಳ ಜತೆಗೆ ಈ ಬಾರಿ ಹೊಸಬರು, ಯುವಜನರು ಹಾಗೂ ಕಳಂಕರಹಿತರಿಗೆ ನೂತನ ಸಂಪುಟದಲ್ಲಿ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿದಿದೆ. ಈ ನಿಟ್ಟಿನಲ್ಲಿ ಕುಡುಚಿ ಶಾಸಕ ಪಿ.ರಾಜೀವ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಧಾರವಾಡ ಅರವಿಂದ್ ಬೆಲ್ಲದ್, ಹಿರಿಯೂರು ಶಾಸಕಿ ಪೂರ್ಣಿಮಾ ಮತ್ತಿತರರ ಹೆಸರುಗಳು ಪ್ರಧಾನವಾಗಿ ಕೇಳಿಬರುತ್ತಿದೆ. ಕೆ.ಎಸ್.ಈಶ್ವರಪ್ಪ, ಜಗದೀಶ್, ಸುರೇಶ್ ಕುಮಾರ್ ರಂತಹ ಹಿರಿಯರಿಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡಲು ಉದ್ದೇಶಿಸಲಾಗಿದೆ ಎಂದು ಗೊತ್ತಾಗಿದೆ.
ಆದಾಗ್ಯೂ ಮಂತ್ರಿ ಸ್ಥಾನಕ್ಕಾಗಿ ಮಾಜಿ ಡಿಸಿಎಂ ಈಶ್ವರಪ್ಪ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವರು ಈಗಾಗಲೇ ತೀವ್ರ ಲಾಬಿ ನಡೆಸಿದ್ದು, ಒತ್ತಡ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಸಂಪುಟದಲ್ಲಿ ಯಡಿಯೂರಪ್ಪ ಬೆಂಬಲಿಗ ಶಾಸಕರು ಹಾಗೂ ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದ ಬಾಂಬೆ ಫ್ರೆಂಡ್ಸ್ ಶಾಸಕರಲ್ಲಿ ಯಾರಿಗೆ ಸ್ಥಾನ ದೊರೆಯಲಿದೆ ಎಂಬುದು ಕುತೂಹಲಕಾರಿಯಾಗಿದೆ.
