ದೇವದಾಸಿಯರನ್ನು ಮರೆತ ಸರ್ಕಾರ: ಭುಗಿಲೆದ್ದ ಸಂತ್ರಸ್ತರ ಆಕ್ರೋಶ

ದಾವಣಗೆರೆ: ದೇವದಾಸಿ ಮಹಿಳೆಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಾವಣಗೆರೆಯಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಮತ್ತು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯ್ತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, 2022-23ರ ಕರ್ನಾಟಕ ಬಜೆಟ್‍ನಲ್ಲಿ ರಾಜ್ಯದ ದೇವದಾಸಿ ಮಹಿಳೆಯರ ಹಕ್ಕೊತ್ತಾಯಗಳನ್ನು ಕಡೆಗಣಿಸಿರುವ ಸರಕಾರದ ನೀತಿಗಳನ್ನು ವಿರೋಧಿಸಿ ಮಾರ್ಚ್ 14 ಮತ್ತು 15 ರಂದು ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಬೇಡಿಕೆ ಈಡೇರಿಸಲು ಇದೇ ತಿಂಗಳ 14ರಂದು ಒಪ್ಪಿದ್ದ ಸಚಿವರು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಮೂರು ಸರ್ಕಾರಗಳು ದೇವದಾಸಿ ಮಹಿಳೆಯರಿಗೆ ನೀಡಲಾಗುವ ಮಾಸಿಕ ಸಹಾಯಧನವನ್ನು ಹೆಚ್ಚಳ ಮಾಡುವುದಾಗಿ ಪ್ರಕಟಿಸಿದರೂ, ಹೆಚ್ಚಳ ಮಾಡದೇ ರಾಜ್ಯ ಸರಕಾರ ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳನ್ನ ನಿರ್ಲಕ್ಷ್ಯ ಮಾಡಿದೆ. ಮಂತ್ರಿಗಳು ಯಾವುದೇ ಚರ್ಚೆಯಿಲ್ಲದೇ ತಲಾ ಮಾಸಿಕ 20 ಸಾವಿರದಿಂದ 40ಸಾವಿರದವರೆಗೆ ತಮ್ಮಗಳ ವೇತನ ಹೆಚ್ಚಳ ಮಾಡಿಕೊಂಡಿದ್ದಾರೆ. ಆದರೆ ದೌರ್ಜನ್ಯದ ದೇವದಾಸಿ ಪದ್ಧತಿಯ ಕಪಿ ಮುಷ್ಠಿಯಲ್ಲಿ ನರಳುತ್ತಿರುವ ಮಹಿಳೆಯರ ಮೂಲಭೂತ ಹಕ್ಕುಗಳನ್ನ ಪಡೆಯಲು ಇರುವಂತಹ ಮಾಸಿಕ ಸಹಾಯಧನವನ್ನು 1500 ರೂ ಗಳಿಂದ 3,000 ರೂಗಳಿಗೆ ಹೆಚ್ಚಳ ಮಾಡದೇ ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿದರು.
ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳನ್ನು ಸಂಕಷ್ಟದಿಂದ ಪಾರು ಮಾಡಲು ರಾಜ್ಯ ಸರ್ಕಾರವು ನೆರವು ನೀಡುವ ಬದಲು ಅವರಿಗೆ ನೀಡಲಾಗುತ್ತಿದ್ದ ಒಂದು ಲಕ್ಷ ರೂ ವರೆಗಿನ ಸಹಾಯಧನದ ಸಾಲ ಸೌಲಭ್ಯವನ್ನು 30ಸಾವಿರಕ್ಕೆ ಕಡಿತ ಮಾಡಿದೆ. ರಾಜ್ಯದಲ್ಲಿ ಈಗಲೂ ಸುಮಾರು 20ಸಾವಿರ ಮಹಿಳೆಯರು ದೇವದಾಸಿ ಗಣತಿ ಪಟ್ಟಿಯಲ್ಲಿಲ್ಲವೆಂದು ಸರ್ಕಾರ ಅವರಿಗೆ ಯಾವ ಸೌಲಭ್ಯವನ್ನು ಕೊಡುತ್ತಿಲ್ಲ. ತಕ್ಷಣ ರಾಜ್ಯದ ಎಲ್ಲಾ ದೇವದಾಸಿ ಮಹಿಳೆಯರನ್ನು ಸರಿಯಾಗಿ ಗುರುತಿಸಿ ಗಣತಿಪಟ್ಟಿಯಿಂದ ಹೊರಗಿರುವವರನ್ನು ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಸುಮಾರು ಒಂದು ಲಕ್ಷ ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರು ಸ್ವಾವಾಲಂಬಿಗಳಾಗುವಂತೆ ಹಾಗೂ ದೇವದಾಸಿ ಪದ್ಧತಿಯನ್ನು ತೊಡೆದು ಹಾಕಲು ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಲಿ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರುಗಳಿಗಾಗಲಿ, ಕನಿಷ್ಟ 30 ಕೋಟಿ ರೂಪಾಯಿಗಳನ್ನ ದೇವದಾಸಿಯವರಿಗೆ ಮೀಸಲಿಟ್ಟು ಮುತುವರ್ಜಿ ವಹಿಸದಿರುವುದು ಸ್ಪಷ್ಠವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕೂಡಲೇ ದೇವದಾಸಿ ಮಹಿಳೆಯರ ಬೇಡಿಕೆಗಳ ಈಡೇರಿಕೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
