ಸಾಲ ಮರುಪಾವತಿ ಮಾಡದ ಹಿನ್ನೆಲೆ, ಹೋಂಸ್ಟೇಗೆ ಬೀಗ!

ಚಿಕ್ಕಮಗಳೂರು: ಸರ್ಫೇಸಿ ಕಾಯ್ದೆ (SARFAESI ACT 2002) ವಿರುದ್ಧ ರಾಜಕೀಯ ಪಕ್ಷಗಳು, ಬೆಳಗಾರರು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಈ ಕಾಯ್ದೆಯ ಸಾಧಕ – ಬಾಧಕಗಳು ಚರ್ಚೆ ಆಗುತ್ತಿರುವ ಹೊತ್ತಿನಲ್ಲೇ ಬ್ಯಾಂಕಿನ ಅಧಿಕಾರಿಗಳು ಸರ್ಫೆಸಿ ಕಾಯ್ದೆ ಅನ್ವಯ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಸರ್ಫೇಸಿ ಕಾಯ್ದೆ ಅನ್ವಯ ಹೋಂಸ್ಟೇ ಒಂದನ್ನು ಬ್ಯಾಂಕಿನ ಸಿಬ್ಬಂದಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡನ ಸ್ವಾಧೀನದಲ್ಲಿದ್ದ ಹೋಂಸ್ಟೇಗೆ ಬೀಗ ಹಾಕಿ ಬ್ಯಾಂಕಿನ ಸಿಬ್ಬಂದಿಗಳು ಸೀಜ್ ಮಾಡಿದ್ದಾರೆ.
ಚಿಕ್ಕಮಗಳೂರಿನ ಹಿರೇಕೊಳಲೆ ಸಮೀಪ ಇರುವ ಲೇಕ್ ವ್ಯೂ ಹಿರೇಕೊಳಲೇ ಹೋಂಸ್ಟೇಯನ್ನು ಪಟ್ಟಣ ಸಹಕಾರ ಬ್ಯಾಂಕ್ ಸಿಬ್ಬಂದಿಗಳು ಸೀಜ್ ಮಾಡಿದ್ದಾರೆ. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕಿನ ಸಿಬ್ಬಂದಿಗಳು ಮಾಲೀಕರಿಗೆ ಹಲವು ಬಾರಿ ನೋಟಿಸ್ ನೀಡಿದ್ದಾರೆ. ನೋಟೀಸಿಗೆ ಯಾವುದೇ ಪ್ರತ್ಯುತ್ತರ ನೀಡದ ಹಿನ್ನೆಲೆಯಲ್ಲಿ ಸರ್ಫೇಸಿ ಕಾಯ್ದೆಯನ್ವಯ ಹೋಂಸ್ಟೇಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 2 ಎಕರೆ ಪ್ರದೇಶದಲ್ಲಿ ಇರುವ ಹೋಂಸ್ಟೇ ಮೇಲೆ ಕಾಂಗ್ರೆಸ್ ಮುಖಂಡ ಶ್ರೀಧರ್ ಉರಾಳ್, ಶಿವಾನಂದ, ಲೀಲಾವತಿ ಎನ್ನುವವರು ಚಿಕ್ಕಮಗಳೂರು ನಗರದಲ್ಲಿ ಇರುವ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ 1998ರಲ್ಲಿ ಸಾಲ ಮಾಡಿದ್ದರು. ಹೋಂಸ್ಟೇ ಮೇಲೆ ಸಾಲ ತೆಗೆದುಕೊಂಡು ಇವರು ಸಾಲ ಮರುಪಾವತಿಯನ್ನೇ ಮಾಡಿರಲಿಲ್ಲ. ಹಲವು ಬಾರಿ ಬ್ಯಾಂಕಿನಿಂದ ನೋಟಿಸ್ ಜಾರಿ ಮಾಡಿದ್ದರು.ಇದಕ್ಕೆ ಯಾವುದೇ ಉತ್ತರವನ್ನು ಈ ಮೂವರು ಕೊಟ್ಟಿರಲಿಲ್ಲ.ಈ ಹಿನ್ನೆಲೆ ಬ್ಯಾಂಕಿನ ಸಿಬ್ಬಂದಿಗಳು ಹೋಂ ಸ್ಟೇ ಗೆ ನೋಟಿಸ್ ಅಂಟಿಸಿ ಮುಟ್ಟುಗೋಲು ಹಾಕಿಕೊಂಡರು.
ಬ್ಯಾಂಕಿನ ಸಾಲ ಮರು ಪಾವತಿ ಮಾಡದ ಬೆಳಗಾರರು ವಿರುದ್ಧ ಸರ್ಫೇಸಿ ಕಾಯ್ದೆಯನ್ನು ಬಳಸಿ ಕ್ರಮ ತೆಗೆದುಕೊಳ್ಳುವ ಪರಿಪಾಠ ಚಿಕ್ಕಮಗಳೂರಿನಲ್ಲಿ ಹೆಚ್ಚಾಗುತ್ತಿದೆ. ಕಾಯ್ದೆ ವಿರುದ್ಧ ಈಗಾಗಲೇ ಕಾಫಿ ಬೆಳಗಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
