ಅಭಿಮತಸಂಗತ

ದೆಹಲಿ ಮುಖ್ಯಮಂತ್ರಿ ಮನೆ ಮೇಲೆ ಪ್ರತಿಭಟನೆ ಹೆಸರಲ್ಲಿ ದಾಳಿ! ಯಾರ ಬಂಧನವೂ ಇಲ್ಲ!!

ನಮ್ಮ ರಾಷ್ಟ್ರದ ಹೆಮ್ಮೆಯ ರಾಜಧಾನಿ ದೆಹಲಿಯಲ್ಲಿ, ದೆಹಲಿಯ ಮುಖ್ಯಮಂತ್ರಿಯೊಬ್ಬರ ಮನೆಯ ಮೇಲೆ ದಾಳಿ ನಡೆಯುತ್ತದೆ. ಮನೆಯೆದುರಿನ ಸಿಸಿಟಿವಿಗಳನ್ನು ಒಡೆದು ಹಾಕಲಾಗುತ್ತದೆ, ಮನೆಯೆದುರಿನ ಗೇಟನ್ನು ಬಣ್ಣ ಹಚ್ಚಿ ವಿರೂಪಗೊಳಿಸಲಾಗುತ್ತದೆ. ಆದರೂ ಈ ರೀತಿ ಮಾಡಿದವರನ್ನು ಪೊಲೀಸರು ತಡೆಯುವುದಿಲ್ಲ! ಬಂಧಿಸುವುದಿಲ್ಲ!!

ಹೌದು, ಈ ಘಟನೆಯ ಮಟ್ಟಿಗೆ ಹೇಳುವುದಾದರೆ ಇಲ್ಲಿ ಪ್ರಜಾಪ್ರಭುತ್ವ ತನ್ನ ಪರಾಕಾಷ್ಠೆಯನ್ನು ತಲುಪಿದೆ! ಏಕೆಂದರೆ ಒಂದು ರಾಜ್ಯದ ಮುಖ್ಯಮಂತ್ರಿಗೆ ಎಷ್ಟರ ಮಟ್ಟಿಗೆ ಭದ್ರತೆಯಿರುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಪೊಲೀಸರ ಸರ್ಪಕಾವಲಿನ ಮಧ್ಯೆಯಿರುವ ಮುಖ್ಯಮಂತ್ರಿಯ ಮನೆಯ ಮೇಲೆ ಈ ರೀತಿ ದಾಳಿ ನಡೆಯುತ್ತದೆ. ಈ ದಾಳಿಯ ಮುಖಂಡತ್ವವನ್ನು ವಹಿಸಿಕೊಂಡವರು ಬೇರಾರೂ ಅಲ್ಲ, ಸ್ವತಃ ಕಾನೂನನ್ನು ರೂಪಿಸುವ ಸಂಸದ ಬಿಜೆಪಿಯ ತೇಜಸ್ವಿ ಸೂರ್ಯ.

ಒಂದೊಮ್ಮೆ ಇದೇ ರೀತಿಯ ಅಥವ ಇದರಲ್ಲಿ ಒಂದೇ ಒಂದು ಪರ್ಸೆಂಟ್ ಘಟನೆ ಪ್ರಧಾನಿ ನಿವಾಸದ ಮನೆಯೆದುರು ನಡೆದಿದ್ದರೆ ಇದನ್ನು ಯಾವ ರೀತಿ ವ್ಯಾಖ್ಯಾನಿಸಲಾಗುತ್ತಿತ್ತು? ಇದಕ್ಕೆ ಉತ್ತರಿಸುವುದು ಕಷ್ಟವೇನಲ್ಲ. ಏಕೆಂದೆರೆ ಚುನಾವಣಾ ಸಮಯದಲ್ಲಿ ಪ್ರಧಾನಿ ಪಂಜಾಬ್ ಪ್ರವಾಸದ ಸಮಯದಲ್ಲಿ ಸೇತುವೆಯೊಂದರ ಮೇಲೆ 15 ನಿಮಿಷಗಳ ಕಾಲ ರಸ್ತೆ ತಡೆಯಿಂದಾಗಿ ಕಾಯುವಂತಾಗಿ ವಾಪಸಾದಾಗ ಇಡೀ ದೇಶವೇ ಇದರ ವಿರುದ್ಧ ಸಿಡಿದುಬಿದ್ದಿತ್ತು. ಸ್ವತಃ ಪ್ರಧಾನಿಮಂತ್ರಿಗಳೇ ಇದು ತಮ್ಮ ಕೊಲೆಗೆ ಹೂಡಿದ ಸಂಚು ಎಂದು ಬಣ್ಣಿಸಿದ್ದರು! ಇಡೀ ಪ್ರಕರಣಕ್ಕೆ ದೇಶದ್ರೋಹದ ಬಣ್ಣ ಹಚ್ಚಿ ಪಂಜಾಬ್ ಮುಖ್ಯಮಂತ್ರಿಗೆ ಪರೋಕ್ಷವಾಗಿ ದೇಶದ್ರೋಹಿಯ ಪಟ್ಟ ಕಟ್ಟಲಾಗಿತ್ತು!

ಹಾಗಾದರೆ ಈಗ ಕೇಜ್ರಿವಾಲ್ ಮನೆಯ ಮುಂದೆ ಬಿಜೆಪಿ ಸಂಸದ ಹಾಗೂ ಕಾರ್ಯಕರ್ತರು ನಡೆಸಿರುವ ಈ ಕೃತ್ಯವನ್ನು ಯಾವ ದೃಷ್ಟಿಕೋನದಿಂದ ನೋಡುವುದು? ಏಕೆಂದರೆ ಪಂಜಾಬಿನ ಘಟನೆಗೆ ಪ್ರಧಾನಿ ನೇರಾನೇರ ಅಲ್ಲಿನ ಮುಖ್ಯಮಂತ್ರಿ ಚನ್ನಿಯವರನ್ನೇ ಹೊಣೆಯಾಗಿಸಿ, ವಿಮಾನ ನಿಲ್ದಾಣದಿಂದ ‘ನಾನಿನ್ನೂ ಬದುಕಿದ್ದೇನೆ ಮುಖ್ಯಮಂತ್ರಿಗಳೇ. ಹಿಂದಿರುಗಿ ಹೋಗುತ್ತಿದ್ದೇನೆ’ ಎಂದು ಅಧಿಕಾರಿಯೊಬ್ಬರ ಬಳಿ ಹೇಳಿದ್ದರಂತೆ.

ಹಾಗಾದರೆ ಈಗ ಪುನಃ ನಾವು ದೆಹಲಿಯ ಮುಖ್ಯಮಂತ್ರಿ ನಿವಾಸದ ಮೇಲಿನ ದಾಳಿಯತ್ತ ತಿರುಗಿ ನೋಡುವುದಾದರೆ ಈ ಘಟನೆಯಿಂದ ಅರವಿಂದ್ ಕೇಜ್ರಿವಾಲ್ ಪ್ರಾಣಕ್ಕೆ ಅಪಾಯವಿಲ್ಲವೆ? ಈ ಘಟನೆಗೆ ಕಾರಣ ಸಿಎಂ ನಿವಾಸದ ಭದ್ರತಾ ವ್ಯವಸ್ಥೆಯ ಪೊಲೀಸರ ವೈಫಲ್ಯ. ದೆಹಲಿ ಪೊಲೀಸರು ಅಲ್ಲಿ ರಾಜ್ಯಸರ್ಕಾರದ ಅಧೀನದಲ್ಲಿಲ್ಲ, ಕೇಂದ್ರದ ಅಧೀನದಲ್ಲಿದ್ದಾರೆ. ಅಲ್ಲಿಗೆ ಇದು ಕೇಂದ್ರ ಸರ್ಕಾರದ ವೈಫಲ್ಯವೆಂದಾಯಿತು. ಪೊಲೀಸರು ನೇರವಾಗಿ ದೇಶದ ಗೃಹಮಂತ್ರಿ ಅಮಿತ್ ಷಾ ಅಧೀನದಲ್ಲಿರುವುದರಿಂದ ಇದು ಅಮಿತ್ ಷಾ ವೈಫಲ್ಯ ಅಥವಾ ಅವರ ಕುಮ್ಮಕ್ಕಿನಿಂದ ನಡೆದ ಪೂರ್ವನಿಯೋಜಿತ ಸಂಚು ಎಂದಾಯಿತು! ಹಾಗಾದರೆ ಚುನಾಯಿತ ಸರ್ಕಾರವೊಂದರ ಮುಖ್ಯಮಂತ್ರಿಯ ಮನೆಯ ಮೇಲೆ ನಡೆದ ದಾಳಿ ದೇಶದ್ರೋಹ ಸಂಚಿನ ಅಡಿಯಲ್ಲಿ ಬರುವುದಿಲ್ಲವೆ?

ಸಿಎಂ ಮನೆಯ ಮೇಲಿನ ದಾಳಿಯ ಬಗೆಗೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಕೃತ್ಯ ಎಸಗಿದವರನ್ನು ದುಷ್ಕರ್ಮಿಗಳು ಎಂದು ಕರೆದಿದ್ದಾರೆ. ಮುಖ್ಯಮಂತ್ರಿ ನಿವಾಸದ ಸಿಸಿಟಿವಿ ಕ್ಯಾಮರಾಗಳು ಮತ್ತು ಭದ್ರತಾ ತಡೆಗೋಡೆಗಳನ್ನು ಮುರಿದು ದುಷ್ಕರ್ಮಿಗಳು ಕೇಜ್ರಿವಾಲ್ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ಅವರು ಈ ಘಟನೆಯ ಬಗ್ಗೆ ಹೇಳಿದ್ದಾರೆ.

ಆದರೆ ಈ ಘಟನೆಯ ಬಗ್ಗೆ ಬಿಜೆಪಿಯ ದೃಷ್ಟಿಕೋನವೇ ಬೇರೆ! ಈ ಘಟನೆಗೆ ಕಾರಣನಾಗಿರುವ ಸಂಸದ ಸೂರ್ಯ “ಅರವಿಂದ್ ಕೇಜ್ರಿವಾಲ್ ಈ ರಾಷ್ಟ್ರದ ಹಿಂದೂಗಳ ಕ್ಷಮೆಯಾಚಿಸಬೇಕು. ನಾವು ಕ್ಷಮೆ ಕೇಳುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ” ಎಂದು ಹೇಳಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಕುರಿತ ಗದ್ದಲದ ನಡುವೆ, ಬಿಜೆಪಿ ಸಂಸದ ತೇಜಸ್ವಿ ಹಾಗೂ ಬಿಜೆಪಿ ಕಾರ್ಯಕರ್ತರು ದೆಹಲಿ ಮುಖ್ಯಮಂತ್ರಿ ನಿವಾಸದೆದುರು ಪ್ರತಿಭಟನೆ ನಡೆಸಿ ಈ ಕೃತ್ಯವೆಸಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ. ಆದರೆ ಅದು ಶಾಂತಿಯುತವಾಗಿರಬೇಕು. ಆದರೆ ಇಲ್ಲಿ ಶಾಂತಿಯನ್ನು ಬಿಟ್ಟು ದಾಳಿಯ ಮಾರ್ಗ ಹಿಡಿದ ಬಿಜೆಪಿ ಕಾರ್ಯಕರ್ತರು ಹಾಗೂ ಸಂಸದರ ಕೃತ್ಯ ಹಾಗೂ ಅವರನ್ನು ಪರೋಕ್ಷವಾಗಿ ಬೆಂಬಲಿಸುವ ಗೃಹಮಂತ್ರಿ ಅಮಿತ್ ಷಾ ನಿಲುವು ಎಷ್ಟು ಸರಿ ಎನ್ನುವುದು ಇಲ್ಲಿ ಮೂಡುವ ಪ್ರಶ್ನೆ.

ಓಂಪ್ರಕಾಶ್ ನಾಯಕ್, ಹಿರಿಯ ಉಪ ಸಂಪಾದಕ, BMG24x7ಲೈವ್​ಕನ್ನಡ

Related Articles

Leave a Reply

Your email address will not be published. Required fields are marked *

Back to top button