ಮಾಜಿ ಸಿಎಂ ಯಡಿಯೂರಪ್ಪ ಒಡೆತನದ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ಗಳಿಂದ ಡೀಸೆಲ್ ಕಳ್ಳತನ

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರ ಒಡೆತನದ ಖಾಸಗಿ ಶಿಕ್ಷಣ ಸಂಸ್ಥೆಗೆ ಸೇರಿದ ನಾಲ್ಕು ಬಸ್ಸುಗಳಲ್ಲಿ ಡಿಸೇಲ್ ಕಳ್ಳತನ ಮಾಡಲಾಗಿದೆ. ರಾತ್ರಿ ವೇಳೆ ಡೀಸೆಲ್ ಟ್ಯಾಂಕ್’ನ ಕ್ಯಾಪ್ ತೆಗೆದು 580 ಲೀಟರ್ ಡಿಸೇಲ್ ಕಳುವು ಮಾಡಲಾಗಿದೆ. ಇನ್ನೂ ಬಸ್ ನಿಲ್ಲಿಸುವ ಸಮೀಪದಲ್ಲೇ ಸೆಕ್ಯೂರಿಟಿಗಳಿದ್ದರೂ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದಾರೆ.
ಶಿವಮೊಗ್ಗ ನಗರದ ಸೋಮಿನಕೊಪ್ಪದ ಮೈತ್ರಿ ಅಪಾರ್ಟ್’ಮೆಂಟ್ ಬಳಿ ಈ ಕಳ್ಳತನ ಘಟನೆ ನಡೆದಿದೆ. ಪಿಇಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಎರಡು ದೊಡ್ಡ ಬಸ್ ಮತ್ತು ಎರಡು ಮಿನಿ ಬಸ್’ಗಳನ್ನು ರಾತ್ರಿ ತಂದು ಬಸ್ ಚಾಲಕರು ನಿಲ್ಲಿಸಿದ್ದರು. ಬೆಳಿಗ್ಗೆ ಚಾಲಕ ಬಂದು ಪರಿಶೀಲಿಸಿದಾಗ ಡೀಸೆಲ್ ಟ್ಯಾಂಕ್’ಗಳ ಕ್ಯಾಪ್ ಓಪನ್ ಆಗಿರುವುದು ನೋಡಿದ್ದು, ಇನ್ನೂ ಎರಡು ಬಸ್ಸುಗಳಲ್ಲಿ ತಲಾ 90 ಲೀಟರ್ ಹಾಗೂ ಒಂದು ಬಸ್ಸಿನಲ್ಲಿ ಅಂದಾಜು 250 ಲೀಟರ್, ಮತ್ತೊಂದರಲ್ಲಿ ಸುಮಾರು 150 ಲೀಟರ್ ಡೀಸೆಲ್ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. 55, 454 ರೂ. ಮೌಲ್ಯದ 580 ಲೀಟರ್ ಡೀಸೆಲ್ ಕಳ್ಳತನವಾಗಿದೆ ಎಂದು ನಗರದ ವಿನೋಬ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮೈತ್ರಿ ಅಪಾರ್ಟ್’ಮೆಂಟ್’ನಲ್ಲಿ ರಾತ್ರಿ ವೇಳೆ ಸೆಕ್ಯೂರಿಟಿಗಳಿದ್ದರೂ ಕಳ್ಳತನವಾಗಿದೆ. ಹಾಗಾಗಿ ಕಳ್ಳತನ ಕುರಿತು ಸೂಕ್ತ ತನಿಖೆ ನಡೆಸುವಂತೆ ಪೋಲಿಸರಿಗೆ ದೂರು ನೀಡಲಾಗಿದೆ.
ಪಿಎಎಸ್ ಶಿಕ್ಷಣ ಸಂಸ್ಥೆಯು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದವರ ಒಡೆತನದ ಟ್ರಸ್ಟ್ ಮಾಲೀಕತ್ವದಲ್ಲಿದೆ. ಹಾಗಾಗಿ ಸೋಮಿನಕೊಪ್ಪದ ಮೈತ್ರಿ ಅಪಾರ್ಟ್’ಮೆಂಟ್ ಬಳಿ ಪ್ರತಿ ದಿನ ಪಿಇಎಸ್ ಕಾಲೇಜಿನ ಬಸ್ಸುಗಳನ್ನು ಅಲ್ಲಿ ನಿಲ್ಲಿಸಲಾಗುತ್ತಿತ್ತು. ಆ ಭಾಗದಿಂದ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳನ್ನು ಕರೆತರಲು ಈ ಬಸ್ಸುಗಳನ್ನು ಬಳಕೆ ಮಾಡಿಕೊಳ್ಳಲಾಗುತಿತ್ತು.
