Breaking NewsLatestಮೆಟ್ರೋ

ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಅಪಾಯ – ತಜ್ಞರ ಸಮಿತಿಯಿಂದ ಸಲಹೆ: ಸಚಿವ ಸುಧಾಕರ್

ಬೆಂಗಳೂರು: ಕೋವಿಡ್ 19 ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯ ಹೆಚ್ಚು ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.25 ರಷ್ಟನ್ನು ಮಕ್ಕಳ ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಎಂ.ಕೃಷ್ಣಪ್ಪ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಕ್ಕಳಿಗಾಗಿ ಸುಮಾರು 25,870 ಆಕ್ಷಿಜನ್ ಸೌಲಭ್ಯವಿರುವ ಹಾಸಿಗೆಗಳು, ಸರ್ಕಾರ ಮತ್ತು ಸರ್ಕಾರೇತರ ಆಸ್ಪತ್ರೆಗಳಲ್ಲಿ ಸುಮಾರು 502 ಮಕ್ಕಳ ವೆಂಟಿಲೇಟರ್ ಗಳನ್ನು ಸಿದ್ದಪಡಿಸಲಾಗಿದೆ ಎಂದರು.

285 ಮಕ್ಕಳ ತಜ್ಞರು, 1250 ವೈದ್ಯಾಧಿಕಾರಿಗಳು,1202 ನರ್ಸ್ ಗಳು ಹಾಗೂ ಕಳೆದ ಜುಲೈನಲ್ಲಿ ಹೊಸದಾಗಿ 85 ಮಂದಿ ಮಕ್ಕಳ ತಜ್ಞರನ್ನು ನೇಮಿಸಿಕೊಳ್ಳಲಾಗಿದೆ. ಕೋವಿಡ್ ಮೂರನೇ ಅಲೆಯನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ಸರ್ಕಾರಿ ವೈದ್ಯಕೀಯ ಕಾಲೇಜುಗಳೂ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ತಜ್ಞರಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದೂ ಸಚಿವ ಸುಧಾಕರ್ ತಿಳಿಸಿದರು.

ಮಕ್ಕಳ ಪರಿಣಾಮಕಾರಿ ಚಿಕಿತ್ಸೆಗೆ ವೆಂಟಿಲೇಟರ್ ಮತ್ತಿತರ ವೈದ್ಯಕೀಯ ಉಪಕರಣಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೆಲವು ಉಪಕರಣಗಳು ಬರುವ ಮೂರು ವಾರಗಳೊಳಗೆ ಲಭ್ಯವಾಗಲಿವೆ ಎಂದರು.

ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲವು ಜಿಲ್ಲಾ ಕೇಂದ್ರಗಳಲ್ಲಿ ವಿಶೇಷವಾಗಿ ಗಡಿ ಜಿಲ್ಲೆಗಳ ಹೆರಿಗೆ ಆಸ್ಪತ್ರೆಗಳಲ್ಲಿ ಹೆಚ್ಚಿನ ಹೆರಿಗೆಗಳಾಗುತ್ತಿವೆ. ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ. ಹೀಗಾಗಿ ಅಲ್ಲಿರುವ ನೂರು ಹಾಸಿಗೆಗಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button