Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿ

ಸಿಎಂ ಇಬ್ರಾಹಿಂ ನಮ್ಮವರು, ನಮಗೆ ಹಳಬರು; ಕುಮಾರಸ್ವಾಮಿ

ರಾಮನಗರ: ಸಿ.ಎಂ.ಇಬ್ರಾಹಿಂ ನಮ್ಮವರು. ಅವರು ನಮಗೆ ಹಳಬರು, ದೇವೇಗೌಡರ ಗರಡಿಯಲ್ಲಿ ಬೆಳೆದವರು ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಾನು ಸಿದ್ದರಾಮಯ್ಯ ಜತೆ ಹೋಗಿ ದೇವೇಗೌಡರನ್ನು ದೂರ ಮಾಡಿಕೊಂಡೆ ಎಂದು ಸ್ವತಃ ಸಿ.ಎಂ.ಇಬ್ರಾಹಿಂ ಅವರೇ ಹೇಳಿದ್ದಾರೆ. ಇಬ್ರಾಹಿಂ ಅವರ ಕೊನೆ ಆಸೆಯಂತೆ ಮುಂದಿನ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಹಾಗಾಗಿ ನಾನು ಜೆಡಿಎಸ್ ಸೇರುತ್ತೇನೆ ಎಂದು ಅವರೇ ಹೇಳಿದ್ದಾರೆ. ಅವರಿಗೆ ನಾನು ಸ್ವಾಗತಿಸುತ್ತೇನೆ ಎಂದರು.

ಚನ್ನಪಟ್ಟದಲ್ಲಿ ಶುಕ್ರವಾರ ಎಲೆಕ್ಟ್ರಿಕ್ ಯುಜಿ ಕೇಬಲ್ ಕಾಮಗಾರಿಗೆ ಚಾಲನೆ ನೀಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ರಾಜ್ಯ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು ಪೂರೈಸಿದೆ. ಸರ್ಕಾರದ ಕಾರ್ಯವೈಖರಿ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ. ಇನ್ನೂ ಒಂದು ವರ್ಷ ಇದೆ. ಅದರ ಬಗ್ಗೆ ನಾನೇಕೆ ಹೇಳಲಿ ಎಂದು ಪ್ರಶ್ನಿಸಿದರು.

ಸರ್ಕಾರ ಇತ್ತು ಎಂದೆನಿಸಿಲ್ಲ

ಸರ್ಕಾರ ಈಗಾಗಲೇ ದೊಡ್ಡ ದೊಡ್ಡ ಜಾಹಿರಾತುಗಳ ಮೂಲಕ ಅವರ ಪ್ರಚಾರ ಪಡೆಯುತ್ತಿದೆ. ಜನ ಸಾಮಾನ್ಯರ ಪರಿಸ್ಥಿತಿ ಬಗ್ಗೆ ಯಾರೂ ನೋಡುತ್ತಿಲ್ಲ. ರಾಜ್ಯದಲ್ಲಿ 6 ತಿಂಗಳು ಸರ್ಕಾರ ಇತ್ತು ಅನ್ನುವ ಭಾವನೆ ಜನರಲ್ಲಿ ಇಲ್ಲ ಎಂದರು.

ಯಾರೊಂದಿಗೂ ಮೈತ್ರಿ ಇಲ್ಲ

2023 ಕ್ಕೆ ಯಾರ ಜೊತೆಗೂ ಮೈತ್ರಿ ಇಲ್ಲ. 123 ಸ್ಥಾನಗಳನ್ನ ಗೆಲ್ಲುವ ವಿಶ್ವಾಸ ಇದೆ. ಕೋವಿಡ್ ವಾತವರಣ ಮುಗಿದ ನಂತರ ಮುಂದಿನ ಒಂದು ವರ್ಷ ಪಕ್ಷ ಸಂಘಟನೆ ಮಾಡುತ್ತೇವೆ. ರಾಜ್ಯಾದ್ಯಂತ ಪ್ರವಾಸ ಮಾದುತ್ತೇವೆ. ಜೆಡಿಎಸ್ ಮುಗಿದೇ ಹೋಯ್ತು ಅನ್ನುವರಿಗೆ ಜನ ಉತ್ತರ ಕೊಡುತ್ತಾರೆ ಎಂದು ಅವರು ಹೇಳಿದರು.

ಪುಟ್ಟರಾಜು-ಸಿದ್ದು ಭೇಟಿ ಗೊತ್ತಿಲ್ಲ

ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಇತರೆ ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡುತ್ತರೋ ಅದನ್ನು ಕಟ್ಟಿಕೊಂಡು ನನಗೇನು? ಎಂದು ಪ್ರಶ್ನಿಸಿದರು. ಯಾರು ಯಾರನ್ನ ಬೇಕಾದರೂ ಭೇಟಿ ಮಾಡಬಹುದು, ಚರ್ಚೆ ಮಾಡಬಹುದು. ನನಗೆ ನನ್ನ ಪಕ್ಷ, ಕಾರ್ಯಕರ್ತರು, ಜನ ಮುಖ್ಯ. ಕಾರ್ಯಕರ್ತರಿದ್ದರೆ ಅಷ್ಟೇ ಪಕ್ಷ ಮತ್ತು ಮುಖಂಡರು ಬೆಳೆಯೋದು ಎಂದರು.

ಕಾರ್ಯಕರ್ತರಿಂದ ಮುಖಂಡರು ಉದ್ಭವ ಆಗುತ್ತಾರೆ. ಬಹಳಷ್ಟು ಜನ ಮುಖಂಡರು ಜೆಡಿಎಸ್ ನಲ್ಲಿ ಬೆಳೆದಿದ್ದಾರೆ. ನಂತರ ಪಕ್ಷವನ್ನ ಬಿಟ್ಟು ಹೋಗಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಮುಖಂಡರನ್ನು ಬೆಳೆಸುವ ಶಕ್ತಿಯಿದೆ.  2023ಕ್ಕೆ ಜೆಡಿಎಸ್ ಶಕ್ತಿ ಏನೆಂದು ತಿಳಿಯಲಿದೆ ಎಂದೂ ಕುಮಾರಸ್ವಾಮಿ ಹೇಳಿದರು.

ರಾಮನಗರ ರಾಜಕೀಯ

ರಾಮನಗರ ಜಿಲ್ಲೆಯಲ್ಲಿ ಇಷ್ಟು ದಿನ ಮಲಗಿದ್ದ ನಾಯಕರೆಲ್ಲ ಈಗ ಎದ್ದು ರಾಜಕೀಯ ಮಾಡುತ್ತಿದ್ದಾರೆ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು. ಚನ್ನಪಟ್ಟಣದ ಅಭಿವೃದ್ಧಿ ಬಗ್ಗೆ ಏನನ್ನೂ ಮಾಡಿಲ್ಲ ಎಂದು ಡಿ.ಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಅವರನ್ನಾಗಲಿ ಅಥವಾ ಮತ್ತೆ ಯಾರನ್ನೇ ಆಗಲಿ  ಟಾರ್ಗೆಟ್ ಮಾಡ್ತಿಲ್ಲ, ನನಗೂ ಅವರಿಗೂ ಸಂಬಂಧ ಇಲ್ಲ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಆದರೆ ನನ್ನನ್ನ ಅವರು ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ,  ರಾಮನಗರ ಜಿಲ್ಲೆಯಿಂದ ನನ್ನನ್ನು ಖಾಲಿ ಮಾಡುಸುತ್ತಾರಂತೆ ಎಂದು ಕಿಡಿಕಾರಿದರು.

ಜಿಲ್ಲೆಯಿಂದ ನನ್ನನ್ನು ಖಾಲಿ ಮಾಡಿಸಲು ಆಗುತ್ತಾ ಅನ್ನುವುದು ಅವರಿಗೆ ಗೊತ್ತಿಲ್ಲ. ರಾಮನಗರ ಜಿಲ್ಲೆಗೂ ನನಗೂ ಇರುವ ಸಂಬಂಧ ಸಾವಿರಾರು ಬಾರಿ ಹೇಳಿದ್ದೇನೆ. ನನಗೂ ಈ ಜಿಲ್ಲೆಗೂ ತಾಯಿ ಮಗನ ಸಂಬಂಧ ಇದೆ ಎಂದು ತಿರುಗೇಟು ನೀಡಿದರು.

ಹತ್ತು ಜನ್ಮ ಎತ್ತಬೇಕು

ಅವರು ಹಣದ ಮೂಲಕ, ದಬ್ಬಾಳಿಕೆ ಮೂಲಕ ಕುಮಾರಸ್ವಾಮಿಯನ್ನು ಬಗ್ಗು ಬಡಿಯಲು ಇನ್ನು ಹತ್ತು ಜನ್ಮ ಎತ್ತಿ ಬರಬೇಕು. ಈ ಜಿಲ್ಲೆಯ ಜನರಿಗೂ ದೇವೇಗೌಡರ ಕುಟುಂಬಕ್ಕೆ ಪೂರ್ವ ಜನ್ಮದ ಸಂಬಂಧ ಇದೆ. ಮೇಕೆದಾಟು ಪಾದಯಾತ್ರೆ ಬಳಿಕ ಜೆಡಿಎಸ್ ಭದ್ರಕೋಟೆ ಛಿದ್ರವಾಗುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇಲ್ಲಿಂದಲೇ ಮತ್ತೆ ಪಾದಯಾತ್ರೆ ಪ್ರಾರಂಭ ಮಾಡ್ತೇವೆ ಎಂದಿದ್ದಾರೆ ಅವರು. ಒಂದಲ್ಲ, ಇನ್ನು ಹತ್ತು‌ ಪಾದಯಾತ್ರೆ ಮಾಡಲಿ, ಇದು ದುರಂಕಾರದ ಮಾತಲ್ಲ. ಅವರ ನಡವಳಿಕೆಗಳನ್ನ‌ ಅರ್ಥ ಮಾಡಿಕೊಂಡಿದ್ದೇನೆ ಎಂದ ಅವರು, ಈ ಜಿಲ್ಲೆಯ ಜನರನ್ನು ಗೆಲ್ಲೋದು ಅಷ್ಟು ಸುಲಭವಲ್ಲ. ಪ್ರೀತಿ, ವಿಶ್ವಾಸ, ದುಡಿಮೆ ಇದ್ದರಷ್ಟೇ ಜಿಲ್ಲೆಯಲ್ಲಿ ಉಳಿಯಲು ಸಾಧ್ಯ. ಹಣಕ್ಕೆ ಇಲ್ಲಿ ಬೆಲೆ ಸಿಗಲ್ಲ ಎಂದರು.

ಮಾಗಡಿ ಶಾಸಕ ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button