ಕಾಂಗ್ರೆಸ್ ಪಾದಯಾತ್ರೆ ತಾತ್ಕಾಲಿಕ ಸ್ಥಗಿತ: ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷ ಕೈಗೊಂಡಿದ್ದ ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ. ಏಐಸಿಸಿ ಸಂದೇಶದ ಹಿನ್ನೆಲೆಯಲ್ಲಿ ಪಾದಯಾತ್ರೆ ಕೈಬಿಡಲು ಕೆಪಿಸಿಸಿ ತೀರ್ಮಾನಿಸಿದೆ. ಪರಿಸ್ಥಿತಿ ತಿಳಿಗೊಂಡ ನಂತರ ಮತ್ತೆ ರಾಮನಗರದಿಂದಲೇ ಪಾದಯಾತ್ರೆ ಪುನರ್ ಆರಂಭಿಸಲು ಗುರುವಾರ ಬೆಳಗ್ಗೆ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪಾದಯಾತ್ರೆಯ ಐದನೇ ದಿನ ಇದಾಗಿತ್ತು.
ಸಭೆ ನಂತರ ಈ ವಿಷಯ ಪ್ರಕಟಿಸಿದ ಶಾಸಕಾಂಗ ನಾಯಕ ಸಿದ್ದರಾಮಯ್ಯ, ಕೋವಿಡ್ ಪರಿಸ್ಥಿತಿ, ಪಕ್ಷದ ಆದೇಶ ಹಾಗೂ ಹೈಕೋರ್ಟ್ ಅಭಿಪ್ರಾಯದ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದರು. ರಾಜ್ಯದಲ್ಲಿ ಕೊರೋನಾ ಹೆಚ್ಚಳಕ್ಕೆ ಬಿಜೆಪಿಯೇ ಕಾರಣ ಎಂದರು. ರಾಜ್ಯದ ಜನರ ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದೆ. ಸರ್ಕಾರದ ಉದ್ದೇಶ ಪಾದಯಾತ್ರೆ ತಡೆಯುವುದಾಗಿತ್ತು. ಬಿಜೆಪಿಯವರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಸರ್ಕಾರ ಕೈಕಟ್ಟಿ ಕುಳಿತಿತ್ತು ಎಂದರು.
ಪಾದಯಾತ್ರೆ ಮತ್ತೆ ಆರಂಭಿಸುತ್ತೇವೆ: ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಇನ್ನೆರಡು ದಿನಗಳಲ್ಲಿ ನಮ್ಮ ಪಾದಯಾತ್ರೆ ಬೆಂಗಳೂರು ತಲುಪಿ ದೊಡ್ಡ ಸಮಾವೇಶ ನಡೆಸಬೇಕಿತ್ತು. ಅಲ್ಲಿ ಲಕ್ಷಾಂತರ ಜನ ಸೇರುವ ಸಾಧ್ಯತೆ ಇತ್ತು. ಜನರ ಹಿತದೃಷ್ಟಿಯಿಂದ ಪಕ್ಷದ ಎಲ್ಲಾ ನಾಯಕರು ಚರ್ಚಿಸಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ. ಪೂರ್ವನಿಗದಿಯಂತೆ ಪಾದಯಾತ್ರೆ ಎಲ್ಲಿ ಅಂತ್ಯವಾಗಬೇಕಿತ್ತು. ಅಲ್ಲೇ ಅಂತ್ಯವಾಗುತ್ತದೆ ಎಂದರು. ಕಾಂಗ್ರೆಸ್ ಪಕ್ಷ ಯಾವಾಗಲೂ ಜನಪರ ಪಕ್ಷ. ಜನರ ಒಳಿತೇ ಕಾಂಗ್ರೆಸ್ ಪಕ್ಷದ ಧ್ಯೇಯ ಎಂದೂ ಅವರು ಹೇಳಿದರು.ಪಾದಯಾತ್ರೆಯನ್ನು ಬೆಂಬಲಿಸಿದ ಸರ್ವರಿಗೂ ಅವರು ಧನ್ಯವಾದ ಅರ್ಪಿಸಿದರು.
ಪಾದಯಾತ್ರೆ ಕೈಬಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪತ್ರ ಮುಖೇನ ಕಾಂಗ್ರೆಸ್ ಮುಖಂಡರಲ್ಲಿ ಮನವಿ ಮಾಡಿದ್ದರು.
