ಸಿಎಂ ದೆಹಲಿ ಪ್ರವಾಸ: ಗರಿಗೆದರಿದ ಸಚಿವಾಕಾಂಕ್ಷಿಗಳ ನಿರೀಕ್ಷೆ!

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಳ್ಳುತ್ತಾರೆ ಎಂಬ ವಿಷಯ ಹೊರ ಬಿದ್ದಿದ್ದು ರಾಜ್ಯ ರಾಜಕೀಯ ವಲಯದಲ್ಲಿ ಮತ್ತೆ ಕುತೂಹಲ ಮೂಡಿಸಿದೆ. ಕೇಂದ್ರ ಸಚಿವರ ಜೊತೆ ಅಧಿಕೃತವಾಗಿ ರಾಜ್ಯದ ಯೋಜನೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ತೆರಳುತ್ತಿದ್ದರೂ, ಸಂಪುಟ ಪುನಾರಚನೆ ಅಥವಾ ವಿಸ್ತರಣೆಯ ಕುರಿತು ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಉದ್ದೇಶವನ್ನು ಸಿಎಂ ಇಟ್ಟುಕೊಂಡಿದ್ದಾರೆ ಎನ್ನಲಾಗ್ತಿದೆ.
ವಿಧಾನಮಂಡಲದ ಅಧಿವೇಶನ ಹಾಗೂ ಪಂಚರಾಜ್ಯಗಳ ಚುನಾವಣೆ ಮುಕ್ತಾಯವಾಗಿರುವುದರಿಂದ ಸಚಿವಾಕಾಂಕ್ಷಿಗಳ ಬಹುದಿನಗಳ ಬೇಡಿಕೆಗೆ ಈ ಬಾರಿಯಾದರೂ ಪಕ್ಷದ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಸಚಿವಾಕಾಂಕ್ಷಿಗಳು ಅಂದುಕೊಂಡಂತೆ ಸಿಎಂ ಬೊಮ್ಮಾಯಿ ಪಕ್ಷದ ಹೈಕಮಾಂಡ್ ಭೇಟಿಯಾದರೆ, ಈ ವಾರಾಂತ್ಯದಲ್ಲಿ ಸಂಪುಟಕ್ಕೆ ಹೊಸಬರ ಆಗಮನವಾಗಲಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ತಮ್ಮ ಚೊಚ್ಚಲ ಬಜೆಟ್ ಮಂಡಿಸಿರುವ ಬೊಮ್ಮಾಯಿ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಿದ್ದಾರೆ. ಜೊತೆಗೆ ರಾಜ್ಯದ ಯೋಜನೆಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಮೇಕೆದಾಟು ಯೋಜನೆಯ ಕುರಿತಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ, ಯೋಜನೆಯ ಅಗತ್ಯತೆ ಮತ್ತು ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನ ವಿರೋಧದಲ್ಲಿ ಯಾವುದೇ ನ್ಯಾಯ ಇಲ್ಲ ಎನ್ನುವದನ್ನು ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿದೆ.
