
ನವದೆಹಲಿ: ಈ ಬಜೆಟ್ ನೂರು ವರ್ಷದ ವಿಕಾಸದ ಹೊಸ ವಿಶ್ವಾಸ ಮೂಡಿಸಿದೆ. ಅರ್ಥ ವ್ಯವಸ್ಥೆಗೆ ಬಲಪಡಿಸುವುದರ ಜತೆಗೆ ಸಾಮಾನ್ಯ ಜನರಿಗೆ ಅನೇಕ ಅವಕಾಶಗಳನ್ನು ಕಲ್ಪಿಸಲಿದೆ. ಈ ಬಜೆಟ್ ಹೆಚ್ಚಿನ ಮೂಲಸೌಲಭ್ಯ, ಹೆಚ್ಚಿನ ಹೂಡಿಕೆ, ಹೆಚ್ಚಿನ ಬೆಳವಣಿಗೆ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳಿಗೆಡೆ ಮಾಡಿಕೊಟ್ಟಿದೆ. ಹಸಿರು ಉದ್ಯೋಗ ( ಗ್ರೀನ್ ಜಾಬ್ಸ್)ನ ಹೊಸ ಕ್ಷೇತ್ರವೊಂದಕ್ಕೂ ಅವಕಾಶ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
2022-23ನೇ ಸಾಲಿನ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಈ ಬಜೆಟ್ ತತ್ಕಾಲದ ಅವಶ್ಯಕತೆಗಳ ಬಗ್ಗೆ ಸಮಾಧಾನಗೊಳಿಸುತ್ತದೆ. ದೇಶದ ಯುವ ಜನರ ಭವಿಷ್ಯವನ್ನೂ ಸುನಿಶ್ಚಿತಗೊಳಿಸುತ್ತದೆ. ಬಜೆಟ್ ಬಗ್ಗೆ ಎಲ್ಲಾ ಕ್ಷೇತ್ರಗಳಿಂದ ಅಭೂತಪೂರ್ವ ಸ್ವಾಗತ ವ್ಯಕ್ತವಾಗಿದೆ. ಸಾಮಾನ್ಯ ಜನರಿಂದ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದಿದ್ದಾರೆ.
ಇದರಿಂದ ಜನತಾ ಜನಾರ್ಧನನ ಸೇವೆಯ ನಮ್ಮ ಆಕಾಂಕ್ಷೆಯನ್ನು ಹಲವು ಪಟ್ಟು ಹೆಚ್ಚಿಸಿದೆ. ಜೀವನದ ಪ್ರತಿ ಕ್ಷೇತ್ರದಲ್ಲೂ ಆಧುನಿಕತೆ ಬರಬೇಕು. ಕಿಸಾನ್ ಡ್ರೋನ್ ನಂತಹ ತಂತ್ರಜ್ಞಾನ, ವಂದೇ ಭಾರತ್ ರೈಲು, ಡಿಜಿಟಲ್ ಕರೆನ್ಸಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ಘಟಕಗಳು, ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗೆ ಡಿಜಿಟಲ್ ಇಕೋ ಸಿಸ್ಟಂ ಇದರ ಲಾಭ ನಮ್ಮ ಯುವಜನ, ನಮ್ಮ ಮಧ್ಯಮ ವರ್ಗ, ಬಡವರು, ದಲಿತರು ಮತ್ತು ಹಿಂದುಳಿದ ವರ್ಗ ಹೀಗೆ ಎಲ್ಲರಿಗೂ ದಕ್ಕುತ್ತದೆ ಎಂದು ಹೇಳಿದ್ದಾರೆ.
ಬಡವರಿಗೆ ಪಕ್ಕಾ ಮನೆ, ನಲ್ಲಿ ಮತ್ತು ಶೌಚಾಲಯದ ವ್ಯವಸ್ಥೆ, ಅಡುಗೆ ಅನಿಲ ಈ ಎಲ್ಲಾ ವಿಷಯಗಳ ಬಗ್ಗೆ ಬಜೆಟ್ ನಲ್ಲಿ ವಿಶೇಷ ಗಮನ ನೀಡಲಾಗಿದೆ. ಜತೆಗೆ ಆಧುನಿಕ ಅಂತರ್ಜಾಲ ಸಂಪರ್ಕದ ಮೇಲೂ ಒತ್ತು ನೀಡಲಾಗಿದೆ. ಹಿಮಾಲಯದಂತಹ ಭಾರತದ ಬೆಟ್ಟಗುಡ್ಡ ಪ್ರದೇಶಗಳಲ್ಲೂ ಸುಗಮ ಜೀವನಕ್ಕೆ ಹೊಸ ಘೋಷಣೆ ಮಾಡಲಾಗಿದೆ. ಹಿಮಾಚಲ್, ಉತ್ತರಾಖಂಡ್, ಜಮ್ಮು-ಕಾಶ್ಮೀರ, ಈಶಾನ್ಯ ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ಇದೇ ಮೊದಲ ಬಾರಿಗೆ ಪರ್ವತ್ ಮಾಲಾ ಯೋಜನೆಗೆ ಚಾಲನೆ ನೀಡಲಾಗುತ್ತಿದೆ ಎಂದೂ ಪ್ರಧಾನಿ ವಿವರಿಸಿದ್ದಾರೆ.
ಈ ಯೋಜನೆ ಅನ್ವಯ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಸಾರಿಗೆ-ಸಂಪರ್ಕದ ಆಧುನಿಕ ವ್ಯವಸ್ಥೆಯನ್ನು ನಿರ್ಮಿಸಲಿದೆ. ಇದರಿಂದ ದೇಶದ ಗಡಿ ಭಾಗಗಳಲ್ಲಿ ದೇಶದ ಭದ್ರತೆ ದೊಡ್ಡ ಬಲ ಬಂದಂತಾಗುತ್ತದೆ. ಭಾರತದ ಕೋಟ್ಯಂತರ ಜನರ ಶ್ರದ್ಧೆಯ ಭಾಗವಾದ ಪವಿತ್ರ ಗಂಗಾ ನದಿಯ ಸ್ವಚ್ಚತೆ ಜತೆಗೆ ರೈತರ ಕಲ್ಯಾಣಕ್ಕಾಗಿ ಮಹತ್ವದ ಹೆಜ್ಜೆಯನ್ನಿರಿಸಲಾಗಿದೆ ಎಂದು ತಿಳಿಸಿದ್ದಾರೆ.
ಉತ್ತರಾಖಂಡ, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ, ಪಶ್ಚಿಮಬಂಗಾಳಗಳಲ್ಲಿ ಗಂಗಾ ನದಿಯ ತೀರದಲ್ಲಿ ಸಹಜ ಕೃಷಿಗೆ ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಪವಿತ್ರ ಗಂಗಾ ನದಿಯನ್ನು ರಾಸಾಯನಿಕ ಮುಕ್ತಗೊಳಿಸಲು ಅನುವಾಗುತ್ತದೆ.
ಕೃಷಿ ಲಾಭದಾಯಕವಾಗಬೇಕು, ಕೃಷಿ ಆಧಾರತಿ ಹೊಸ ಸ್ಟಾರ್ಟ್ ಅಪ್ಸ್ ಗಳನ್ನು ಪ್ರೋತ್ಸಾಹಿಸಲು ವಿಶೇಷ ನಿಧಿ ಮತ್ತು ಆಹಾರ ಸಂಸ್ಕರಣೆಗೆ ಹೊಸ ಪ್ಯಾಕೇಜ್ ರೂಪಿಸಲಾಗಿದೆ. ಇದರಿಂದ ರೈತರ ಆದಾಯ ಹೆಚ್ಚಳಕ್ಕೆ ಸಹಾಯವಾಗುತ್ತದೆ. ಬೆಂಬಲ ಬೆಲೆ ಖರೀದಿಯಿಂದ ರೈತರ ಖಾತೆಗೆ ಎರಡೂಕಾಲು ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ರವಾನಿಸಲಾಗುತ್ತಿದೆ ಎಂದಿದ್ದಾರೆ.
ಕೊರೋನಾ ಕಾಲದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಲಾಗಿದ್ದು, ಇದು ಆತ್ಮನಿರ್ಭರ್ ಭಾರತದ ಸ್ಥಾಪನೆ ನಿಟ್ಟಿನಲ್ಲಿ ಅತಿ ದೊಡ್ಡ ಬಲವಾದ ಹೆಜ್ಜೆ ಎಂದು ಪ್ರಧಾನಿ ಹೇಳಿದ್ದಾರೆ.
