ಸಿಎಂ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ಖಚಿತ

ಬೆಂಗಳೂರು: ಜುಲೈ 26 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಸಿಎಂ ಹುದ್ದೆಗೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಲಿದ್ದಾರೆ. ಜುಲೈ 25 ರಂದು ವರಿಷ್ಠರು ಅಧಿಕೃತ ಸೂಚನೆ ನೀಡಲಿದ್ದು, ಇದರ ಸುಳಿವಿರುವ ಯಡಿಯೂರಪ್ಪ ರಾಜ್ಯಪಾಲರ ಭೇಟಿಗಾಗಿ ಸಮಯಾವಕಾಶ ಕೋರಿದ್ದರು.
ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಭೇಟಿಗೆ ರಾಜ್ಯಪಾಲರು ಸಮಯ ನೀಡಿದ್ದಾರೆ. ರಾಜೀನಾಮೆ ನೀಡಿದ ನಂತರ ತಮ್ಮ ಸರ್ಕಾರದ ಎರಡು ವರ್ಷಗಳ ಸಾಧನೆಯ ಬಗ್ಗೆ ಯಡಿಯೂರಪ್ಪ ನಾಡಿನ ಜನರಿಗೆ ವಿವರಿಸಲಿದ್ದಾರೆ.
ಪಕ್ಷ ವರಿಷ್ಠರ ಸೂಚನೆ ಪಾಲಿಸಲು ಸಿದ್ದ
ಬರುವ ಜುಲೈ 25 ರಂದು ತಮ್ಮ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಲಿದೆ. ಅಂದು ಹೈಕಮಾಂಡ್ ಯಾವ ಸಂದೇಶ ಕಳುಹಿಸುತ್ತದೋ ಅದನ್ನು ನಾನು ಪಾಲಿಸುತ್ತೇನೆ. ಇಡೀ ದೇಶದಲ್ಲಿ 75 ವರ್ಷ ಮೀರಿದ ಯಾರಿಗೂ ಬಿಜೆಪಿಯಲ್ಲಿ ಅಧಿಕಾರ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಷಾ ಹಾಗೂ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ನನ್ನ ಬಗ್ಗೆ ವಿಶೇಷ ಕಾಳಜಿ ತೋರಿಸಿ ಅಧಿಕಾರ ನೀಡಿದ್ದಾರೆ. ಜುಲೈ 26 ಕ್ಕೆ ನಾನು ಎರಡು ವರ್ಷ ಅಧಿಕಾರ ಪೂರೈಸುತ್ತೇನೆ ಎಂದರು.
ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು. ರಾಜ್ಯದ ವಿವಿಧ ಮಠಾಧೀಶರು ನನ್ನ ಬಗ್ಗೆ ತೋರಿಸಿದ ವಿಶೇಷ ಕಾಳಜಿಗೆ ಧನ್ಯವಾದಗಳು. ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದೂ ಅವರು ತಿಳಿಸಿದರು.
