ಹುಬ್ಬಳ್ಳಿಯ ‘ಕೇಶವ ಕುಂಜ’ದಲ್ಲಿ ಸಭಾಪತಿ ಹೊರಟ್ಟಿ ಪ್ರತ್ಯಕ್ಷ; ಕುತೂಹಲ ಕೆರಳಿಸಿದ ರಾಜಕೀಯ ನಡೆ

ಧಾರವಾಡ: ಜೆಡಿಎಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿ, ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಸವರಾಜ್ ಹೊರಟ್ಟಿಯರು, ಸದ್ಯ ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ಬಸವರಾಜ್ ಹೊರಟ್ಟಿಯವರು ಹುಬ್ಬಳ್ಳಿಯಲ್ಲಿಯೇ ವಾಸಿಸುತ್ತಿದ್ದರೂ ಅಪ್ಪಿ ತಪ್ಪಿಯೂ ಆರ್ಎಸ್ಎಸ್ ಕಚೇರಿಯ ಕೇಶವ ಕುಂಜ ಕಡೆ ತಿರುಗಿಯೂ ನೋಡಿರಲಿಲ್ಲ. ಅಷ್ಟೊಂದು ಅಂತರವನ್ನು ಕಾಯ್ದಕೊಂಡು ಬಂದಿದ್ದರು. ಆದರೆ ನಿನ್ನೆ ಕೇಶವ ಕುಂಜದಲ್ಲಿ, ಡಿಸಿಎಂ ಅಶ್ವತ್ಥನಾರಾಯಣ ಅವರೊಂದಿಗೆ ಭೇಟಿ ನೀಡಿ, ಸ್ಥಳಿಯ ರಾಜಕೀಯ ನಾಯಕರನ್ನು ಹುಬ್ಬೇರಿಸಿ ನೋಡುವಂತೆ ಮಾಡಿದ್ದಾರೆ.
ಸಭಾಪತಿ ಬಸವರಾಜ್ ಹೊರಟ್ಟಿಯವರ ಹುಬ್ಬಳ್ಳಿಯ ಕೇಶವ ಕುಂಜ ಭೇಟಿ ಹಿಂದೆ ರಾಜಕೀಯ ನಿಗೂಢ ನಡೆ ಏನಾದರೂ ಇದೇಯಾ ಎಂಬ ಅನುಮಾನಗಳನ್ನು ಹುಟ್ಟು ಹಾಕುತ್ತಿದ್ದು, ಅಲ್ಲದೆ ಇದು ಬಸವರಾಜ್ ಹೊರಟ್ಟಿ ಅವರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶ ಪೂರ್ವಕವೋ ಎನ್ನುವುದು ಕೂಡಾ ಸ್ಪಷ್ಟಗೊಂಡಿಲ್ಲವಾದರೂ, ಮುಂದಿನ ದಿನಗಳಲ್ಲಿ ರಾಜಕೀಯ ನಿಗೂಢ ನಡೆಗೆ ಇದು ಸಾಕ್ಷಿಯಾಗಲಿದೇಯಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಇನ್ನೂ ಬಸವರಾಜ್ ಹೊರಟ್ಟಿಯವರು ಜೆಡಿಎಸ್ ಪಕ್ಷದಲ್ಲಿಯೇ ಇದ್ದರೂ ಕೂಡಾ, ಅವರು ಈ ಹಿಂದೆ ಪಕ್ಷದ ಹಿರಿಯ ನಾಯಕರ ವರ್ತನೆಗಳಿಗೆ ಖಾರವಾಗಿ ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದರು. ಅಲ್ಲದೆ ಮಾಜಿ ಸಿಎಂ ಕುಮಾರಸ್ವಾಮಿ ಇರಬಹುದು ಅಥವಾ ಜೆಡಿಎಸ್ ಪಕ್ಷದ ಬೇರೆ ಬೇರೆ ನಾಯಕರ ಇರಬಹುದು, ಅವರ ವಿರುದ್ಧ ನೇರವಾಗಿಯೇ ಮಾತಾಡುತ್ತಾ ಬಂದಿದ್ದಾರೆ. ಇದರ ಜೊತೆಗೆ ಬೇರೆ ಬೇರೆ ಪಕ್ಷಗಳ ನಾಯಕರಗಳ ಜೊತೆಗೆ ಉತ್ತಮ ಒಡನಾಟವನ್ನು ಬಸವರಾಜ್ ಹೊರಟ್ಟಿಯವರು ಹೊಂದಿದ್ದು, ಇದರಿಂದಾಗಿಯೇ ಸದ್ಯಕ್ಕೆ ವಿಧಾನ ಪರಿಷತ್ ಸಭಾಪತಿಗಳಾಗಿ ಬಸವರಾಜ್ ಹೊರಟ್ಟಿಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ಬಿಜೆಪಿ ನಾಯಕರು ಜೆಡಿಎಸ್‌ನ ಸ್ಥಳಿಯ ನಾಯಕರಾಗಿದ್ದ ಮಾಜಿ ಪಾಲಿಕೆ ಸದಸ್ಯ ರಾಜಣ್ಣ ಕೊರವಿಯವರನ್ನು ಬಿಜೆಪಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಮುಂದೊದಿನ ಹೊರಟ್ಟಿಯವರನ್ನು ಬಿಜೆಪಿಗೆ ಸೆಳೆದರು ಅಚ್ಚರಿ ಪಡಬೇಕಿಲ್ಲ ಎಂಬ ಮಾತುಗಳು ಆಗಿನಿಂದಲ್ಲೂ ಕೇಳಿ ಬರುತ್ತಿದ್ದವು, ಈಗ ಬಸವರಾಜ್ ಹೊರಟ್ಟಿಯವರು ಕೇಶವ ಕುಂಜ ಭೇಟಿ ಇದಕ್ಕೆ ಪುಷ್ಟಿ ನೀಡುತ್ತಿದೆ.
ಹುಬ್ಬಳ್ಳಿಯ ಹೆಗ್ಗೆರೆ ಪ್ರದೇಶದಲ್ಲಿರೋ ಆರ್ ಎಸ್ ಎಸ್ ಕಚೇರಿ ಕೇಶವ ಕುಂಜಕ್ಕೆ ಬಸವರಾಜ ಹೊರಟ್ಟಿಯವರು, ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಅವರೊಂದಿಗೆ ಭೇಟಿ ನೀಡಿದ್ದು, ಈ ವೇಳೆ ಶಾಸಕ ಅರವಿಂದ ಬೆಲ್ಲದ್, ಎಂಎಲ್ಸಿ ಎಸ್.ವಿ.ಸಂಕನೂರ, ಆರ್ಎಸ್ಎಸ್ ಪ್ರಮುಖ ಶ್ರೀಧರ್ ನಾಡಿಗೇರ್, ಗೋವಿಂದಪ್ಪ ಮತ್ತಿತರರು ಉಪಸ್ಥಿತರಿದ್ದರು. ಅಲ್ಲದೆ ಈ ವೇಳೆ ಡಿಸಿಎಂ ಅಶ್ವತ್ಥನಾರಾಯಣ ಅವರು ಆರ್ಎಸ್ಎಸ್ ಮುಖಂಡರೊಂದಿಗೆ ರಾಜಕೀಯ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು ಎಂದು ಹೇಳಲಾಗುತ್ತಿದೆ.
ಕರ್ನಾಟಕ ವಿಶ್ವವಿಶ್ವವಿದ್ಯಾಲಯ ಧಾರವಾಡದ ಕಾರ್ಯಕ್ರಮ ಮುಗಿಸಿದ ನಂತರ ಅಶ್ವತ್ಥನಾರಾಯಣ ಕೇಶವ ಕುಂಜಕ್ಕೆ ಭೇಟಿ ನೀಡಿದ್ದು, ಈ ವೇಳೆ ಅವರೊಂದಿಗೆ ಸಭಾಪತಿ ಹೊರಟ್ಟಿ ಅವರೂ ಕೇಶವ ಕುಂಜಕ್ಕೆ ಆಗಮಿಸಿದರು, ಆದರೆ ಹಿಂದೆದೂ ಇತ್ತಕಡೆ ಮುಖ ಮಾಡದ ಹೊರಟ್ಟಿಯವರ ಈಗಿನ ಭೇಟಿ ಹಲವು ಚರ್ಚೆಗಳನ್ನು ಹುಟ್ಡು ಹಾಕಿದೆ. ಮುಂದಿನ ದಿನಗಳಲ್ಲಿ ಹೊರಟ್ಟಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ತಾರಾ ಎಂಬ ಗುಮಾನಿಗಳು ಈಗ ಕೇಳಿ ಬರತೊಡಗಿವೆ.
ಡಿಸಿಎಂ ಅಶ್ವತ್ಥನಾರಾಯಣ ಅವರು ನಮ್ಮ ತವರು ಜಿಲ್ಲೆಗೆ ಭೇಟಿ ನೀಡಿದ್ದರು, ಹಾಗಾಗಿ ಅವರೊಂದಿಗೆ ಕಾರ್ಯಕ್ರಮ ಜೊತೆಗೆ ಇಲ್ಲಿಗೂ ಭೇಟಿ ನೀಡಿರುವುದಾಗಿ ಸಭಾಪತಿ ಬಸವರಾಜ್ ಹೊರಟ್ಟಿಯವರು ಹೇಳಿಕೊಂಡಿದ್ದು, ಇನ್ನೂ ಹೊರಟ್ಟಿಯವರ ಕೇಶವ ಕುಂಜ ಭೇಟಿ, ಕುಶಲೋಪರಿ ಮಾತುಗಳಿಗಷ್ಟೇ ಸೀಮಿತವಾಗಿತ್ತು, ರಾಜಕೀಯ ಚರ್ಚೆಗಕಳು ಇಲ್ಲಿ ನಡೆದಿಲ್ಲ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದು, ಆದರೆ ಇಲ್ಲಿಯೇ ಇದ್ದು ಎಂದೂ ಈ ಕಡೆ ತೀರುಗಿ ನೋಡದ ಹೊರಟ್ಟಿಯವರು ಈಗ ಆರ್ಎಸ್ಎಸ್ ನಾಯಕರೊಂದಿಗಿನ ಭೇಟಿ ಹಲವು ಪ್ರಶ್ನೆಗಳ ಜೊತೆಗೆ ಗೂಸು ಗೂಸು ಮಾತ್ತುಗಳಿಗೆ ದಾರಿ ಮಾಡಿಕೊಟ್ಟಿರುವದು ಮಾತ್ರ ಸುಳ್ಳಲ್ಲ.
