Breaking Newsಉತ್ತರ ಕನ್ನಡ

ಗೋಕರ್ಣ: ಸೆಲ್ಫೀ ನೋಡಿ ಮಾಜಿ ಪ್ರೇಯಸಿ ಹತ್ಯೆಗೆ ಬಂದವನ ಬಂಧನ

ಕಾರವಾರ : ಆಕೆಯ ಒಂದೇ ಒಂದು ಸೆಲ್ಫಿ ಸಾವಿನತ್ತ ಕರೆದುಕೊಂಡು ಹೋಗಿತ್ತು. ಪ್ರೀತಿಸಿ ಕೈಕೊಟ್ಟ ಹುಡುಗಿ ಫೋಟೋ ನೋಡಿ ಕೊಲ್ಲಲು ಕುಡ್ಲೆ ಬೀಚ್‌ಗೆ ಬಂದಿದ್ದ ಮಾಜಿ ಪ್ರೇಮಿ, ಮಾಜಿ ಪ್ರಿಯತಮೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಾಜಿ ಪ್ರೇಯಸಿಯನ್ನು ಹಿಂಬಾಲಿಸಿಕೊಂಡು ಬಂದು ಕೊಲೆಗೆ ಯತ್ನಿಸಿ,ಪರಾರಿಯಾಗಿ ವೇಷ ಬದಲಾಯಿಸಿಕೊಂಡಿದ್ದ ಆರೋಪಿಯನ್ನು ಪುಣೆಯಲ್ಲಿ ಬಂಧಿಸುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಜುಲೈ 7 ರಂದು ಗೋಕರ್ಣದ ಕುಡ್ಲೆ ಬೀಚ್‌ಗೆ ಸ್ನೇಹಿತರ ಜೊತೆ ಬಂದಿದ್ದ ಹರ್ಯಾಣ ಮೂಲದ ಪ್ರವಾಸಿಯೊಬ್ಬಳ ಮೇಲೆ ಅನಾಮಿಕನೊಬ್ಬ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದ.ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ನೊಂದ ಮಹಿಳೆ ದೂರು ದಾಖಲಿಸಿದ್ದಳು.

ಪ್ರಕರಣದ ಗಂಭೀರತೆ ಅರಿತ ಪೊಲೀಸರು ಆರೋಪಿಯ ಪತ್ತೆಗೆ ಮುಂದಾದರು.ತನಿಖೆ ಕೈಗೊಂಡ ಪೊಲೀಸರಿಗೆ ಈ ಪ್ರಕರಣದಲ್ಲಿ ಕುತೂಹಲಕಾರಿಯ ಕಥೆ ಇರುವುದು ತಿಳಿದಿದೆ.ಹಲ್ಲೆಗೊಳಗಾದವಳು ಹರ್ಯಾಣ ಮೂಲದ ಮಹಿಳೆಯಾದರೆ ಹಲ್ಲೆ ಮಾಡಿದಾತ ಮಹಾರಾಷ್ಟ್ರ ಪುಣೆ ಮೂಲದ ತುಷಾರ್ ಮರಾಠೆ ಎನ್ನುವವನು.ಇಬ್ಬರು ಪರಿಚಿತರಾಗಿದ್ದು, ಮಾಜಿ ಪ್ರೇಮಿಗಳು.

ಸೆಲ್ಫಿ ಜೀವಕ್ಕೆ ಸಂಚಕಾರ ತಂದಿತು

ಮಹಿಳೆ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಇರುವುದು ಮಾಜಿ ಪ್ರೇಮಿಗೆ ತಿಳಿದಿದ್ದು ಸೆಲ್ಫಿ ಮೂಲಕ.ಸೆಲ್ಫಿಯನ್ನು ಆಕೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಳು.ಇದನ್ನು ನೋಡಿದ ಮಾಜಿ ಪ್ರೇಮಿ ಗೋಕರ್ಣಕ್ಕೆ ಬಂದು ಮಾಜಿ ಪ್ರೇಯಸಿ ಇದ್ದ ಹೋಟೆಲ್‌ನಲ್ಲಿಯೇ ರೂಂ ಪಡೆದಿದ್ದ.

ಮಹಿಳೆ ಗೆಳತಿಯರು ಊಟಕ್ಕೆ ಹೋದಾಗ ರೂಂನಲ್ಲಿ ಒಬ್ಬಳೇ ಇರುವುದನ್ನು ಖಾತರಿಪಡಿಸಿಕೊಂಡು ದಾಳಿ ಮಾಡಿದ್ದ.ಹೇರ್ ಡ್ರೈಯರ್ ವೈರ್‌ನಿಂದ ಕುತ್ತಿಗೆ ಬಿಗಿದು, ಪೆನ್‌ನಿಂದ ಕಣ್ಣು ಮತ್ತು ಮುಖಕ್ಕೆ ಚುಚ್ಚಿದ್ದ.ಮುಖಕ್ಕೆ ಹೊಡೆದು, ದಿಂಬಿನಿಂದ ಉಸಿರುಗಟ್ಟಿಸಿದಾಗ ಮಹಿಳೆ ಮೂರ್ಛೆ ಹೋದಳು. ಆಕೆ ಸತ್ತಿದ್ದಾಳೆ ಎಂದು ತಿಳಿದು ಆತ ಪರಾರಿಯಾಗಿದ್ದ.

ಎಸ್.ಪಿ.ಶಿವಪ್ರಕಾಶ ದೇವರಾಜು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಭಟ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಒಂದು ಮತ್ತು ಕುಮಟಾ ಸಿಪಿಐ ಶಿವಪ್ರಕಾಶ ನಾಯ್ಕ ನೇತೃತ್ವದಲ್ಲಿ ಇನ್ನೊಂದು ತಂಡವನ್ನು ರಚಿಸಿದ್ಧರು.

ತಲೆ ಬೋಳಿಸಿಕೊಂಡು, ವೇಷ ಬದಲಾಯಿಸಿಕೊಂಡಿದ್ದ ಆರೋಪಿಯನ್ನು ಪುಣೆಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ತನಿಖೆಯಲ್ಲಿ ಪಾಲ್ಗೊಂಡ ಎಲ್ಲಾ ಪೊಲೀಸರನ್ನು ಎಸ್.ಪಿ. ಅಭಿನಂದಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button