Breaking NewsLatestಜಿಲ್ಲಾ ಸುದ್ದಿದಾವಣಗೆರೆರಾಜಕೀಯ

ನಮ್ಮ ಸಮಾಜ ಒಡೆಯಲು ಯಾರಿಂದಲೂ ಸಾಧ್ಯವಿಲ್ಲ: ವಚನಾನಂದ ಶ್ರೀಗಳಿಗೆ ಜಯಮೃತ್ಯುಂಜಯ ಸ್ವಾಮೀಜಿ ಟಾಂಗ್

ದಾವಣಗೆರೆ: ಹೊರಗಡೆ ಇಟ್ಟಿಗೆ ಸಿಮೆಂಟ್ ಹಾಕಿ ಅಥವಾ ಪ್ಲಾಸ್ಟರ್ ಪ್ಯಾರೀಸ್ ಮಾಡಿಸಿ ಟೈಲ್ಸ್ ಹಾಕಿ ಸಮಾಜ ಕಟ್ಟಿಲ್ಲ. ಜನರ ಹೃದಯದಲ್ಲಿ ಸಮಾಜ ಕಟ್ಟಿದ್ದೇನೆ. ಮನಸ್ಸು ಕಟ್ಟುವ ಕೆಲಸ ಮಾಡಿದ್ದೇನೆ. ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ಎಂದು ಬಸವಣ್ಣನವರು ಹೇಳಿದ್ದಾರೆ. ಮನಸ್ಸು ಕಟ್ಟುವ ಕೆಲಸಕ್ಕಷ್ಟೇ ನಮ್ಮ ಗಮನ. ಸಮಾಜ ಒಡೆದು ಹೋಗುತ್ತದೆ ಎಂದು ಬಹಳ ಜನರು ತಿಳಿದುಕೊಂಡಿದ್ದಾರೆ. ಹದಿನಾಲ್ಕು ವರ್ಷಗಳ ಕಾಲ ರಕ್ತ ಸುರಿಸಿ ಸಮಾಜ ಕಟ್ಟಿದ್ದೇವೆ. ನಮ್ಮ ಸಮಾಜ ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಾದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಶ್ರೀಗಳ ಹೆಸರು ಪ್ರಸ್ತಾಪಿಸದೇ ಟೀಕಾ ಪ್ರಹಾರ ನಡೆಸಿದರು. ಬರುವ ದಿನಗಳಲ್ಲಿ ಸಮಾಜ ಮತ್ತಷ್ಟು ಗಟ್ಟಿಯಾಗುತ್ತದೆ. ಯಾರು ಏನೇ ಮಾಡಿಕೊಳ್ಳಲಿ. ನಾನು ಯಾವುದಕ್ಕೂ ವಿಚಲಿತ ಆಗಲ್ಲ. ನನ್ನದೇನಿದ್ದರೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುವಂತಾಗಬೇಕು ಎಂಬುದಷ್ಟೇ. ಇದಕ್ಕಾಗಿ 712 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದೇನೆ. ಈಗ ಮತ್ತಷ್ಟು ಶಕ್ತಿ ಬಂದಿದೆ. ಸಮಾಜ ನಮ್ಮ ಜೊತೆಗಿದೆ. ಮೀಸಲಾತಿ ಸಿಗುವವರೆಗೆ ವಿರಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಮಖಂಡಿಯಲ್ಲಿ ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆ ಮಾಡುತ್ತಿರುವುದರ ಹಿಂದೆ ಯಾರಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ. ಸಾವಿರ ಮಠ ಮಾಡಿಕೊಳ್ಳಲಿ, ಸಾವಿರ ಪೀಠ ಮಾಡಿಕೊಳ್ಳಲಿ. ನನ್ನ ಉದ್ದೇಶ ಕೇವಲ ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂಬುದು. ಬೇರೆ ವಿಚಾರಗಳಿಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ ಎಂದು ತಿಳಿಸಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಹೋರಾಟ ಶುರು ಮಾಡಿದಾಗಿನಿಂದಲೂ ಸಮಾಜದಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಸರ್ಕಾರದ ಮಟ್ಟದಲ್ಲಿಯೂ ಚರ್ಚೆಯಾಗಿದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸಮಾಜದ ಜನರು ಇರುವ ಕಡೆಗಳಲ್ಲಿ ಹೋಗಿ ಸರ್ವೇ ಕಾರ್ಯ ಮಾಡಿದ್ದಾರೆ. ವಿಧಾನಸಭೆ ಉಪಚುನಾವಣೆ, ಲೋಕಸಭೆ ಉಪಚುನಾವಣೆ, ವಿಧಾನಪರಿಷತ್ ಚುನಾವಣೆ, ಕೊರೊನಾ ಸೋಂಕು ಹೆಚ್ಚಳ ಆದ ಕಾರಣ ವೇಗವಾಗಿ ಸರ್ವೇ ಕಾರ್ಯ ನಡೆದಿಲ್ಲ. ಈ ಆಯೋಗ ಸರ್ಕಾರಕ್ಕೆ ವರದಿ ಕೊಟ್ಟ ಬಳಿಕ ಆದಷ್ಟು ಬೇಗಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದು ಶ್ರೀಗಳು ಹೇಳಿದರು.

ನೂರಾರು ಕಿಲೋಮೀಟರ್ ಪಾದಯಾತ್ರೆ, ಹೋರಾಟ, ಉಪವಾಸ ಸತ್ಯಾಗ್ರಹ ನಡೆಸಿದ ಪರಿಣಾಮವಾಗಿ ಈಗ ಸಮುದಾಯಕ್ಕೆ ಮೀಸಲಾತಿ ಸಿಗುವ ಸಮಯ ಹತ್ತಿರವಾಗುತ್ತಿದೆ. ಇಂಥ ಸಮಯದಲ್ಲಿ ಸಂಪೂರ್ಣವಾಗಿ ಮೀಸಲಾತಿ ಹೋರಾಟ ಯಶಸ್ವಿಯಾದರೆ ಇದರ ಪ್ರತಿಫಲ ಬಸನಗೌಡ ಪಾಟೀಲ್ ಯತ್ನಾಳ್, ಶಿವಶಂಕರ್, ಅರವಿಂದ್ ಬೆಲ್ಲದ್, ಸಿ. ಸಿ. ಪಾಟೀಲ್, ವಿಜಯಾನಂದ ಕಾಶೆಂಪನವರ್ ಅವರಿಗೆ ಸಿಗುತ್ತದೆ. ರಾಷ್ಟ್ರ, ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಆಗಿದೆ. ಇದರಿಂದ ಶ್ರೀಗಳಿಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರ ಬಗ್ಗೆ ಏನನ್ನೂ ಹೇಳುವುದಿಲ್ಲ. ನನ್ನ ಉದ್ದೇಶ ಕೇವಲ 2 ಎ ಮೀಸಲಾತಿ ಗುರಿ ಮುಟ್ಟುವಂಥದ್ದು. ನಮ್ಮದು ಸಮಾಜ ಕಟ್ಟುವ ಕೆಲಸ. ಸಮಾಜದಲ್ಲಿ ಗೊಂದಲ ಉಂಟು ಮಾಡುವ ಕೆಲಸ ಮಾಡಲ್ಲ. ಉಳಿದವರು ಯಾರಿಗಾದರೂ ಬೆಂಬಲ ನೀಡಲಿ, ಅದಕ್ಕೆ ನಮ್ಮ ಅಭ್ಯಂತರವೇನಿಲ್ಲ ಎಂದು ಮೂರನೇ ಪೀಠದ ಸ್ಥಾಪನೆ ಬಗ್ಗೆ
ಅಸಮಾಧಾನ ವ್ಯಕ್ತಪಡಿಸಿದರು.

ಇರುವಂಥ ವಯಸ್ಸು, ಆಯಸ್ಸು, ಹುಮ್ಮಸ್ಸಿನಲ್ಲಿ ಸಮಾಜ ಕಟ್ಟಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಬೇರೆ ಯಾವುದೇ ವಿಚಾರ ಗೊತ್ತಿಲ್ಲ. ನನಗೆ ಗೊತ್ತಿರುವುದು ಕೇವಲ ಕೂಡಲ ಸಂಗಮ ಪೀಠ ಅಷ್ಟೇ. ಮೀಸಲಾತಿ ಯಾವಾಗ ಪಡೆಯುತ್ತೇವೆ ಎಂದು ಮನಸ್ಸು ಆಲೋಚಿಸುತ್ತಿದೆ. ಸಮಾಜದ ಅಭಿವೃದ್ಧಿ, ಸಂಘಟನೆ, ಒಳಿತು ಮಾಡಲು ಹೋರಾಟ ಮಾಡುತ್ತಿದ್ದೇನೆ. ಚಳವಳಿ ಒಂದು ಹಂತಕ್ಕೆ ಬರುವ ಸಂದರ್ಭದಲ್ಲಿ ಇಂಥ ಗೊಂದಲ ಆಗುವುದು ಸರ್ವೇ ಸಾಮಾನ್ಯ. ಬಸವಣ್ಣ, ಚನ್ನಮ್ಮ, ಗಾಂಧೀಜಿ, ಅಂಬೇಡ್ಕರ್ ಕಾಲದವರೆಗೂ ಆಗಿದೆ. ಇಂಥ ಫಲಪ್ರದವಾಗುವ ವೇಳೆಯಲ್ಲಿ ಸಹಜವಾಗಿಯೇ ಭಿನ್ನಾಭಿಪ್ರಾಯಗಳು ಬರುತ್ತವೆ. ಯಾವುದಕ್ಕೂತಲೆಕೆಡಿಸಿಕೊಳ್ಳುವುದಿಲ್ಲ. ಸಮಾಜ ಕಟ್ಟುವ, ಕೂಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರ ಮನಸ್ಸಿನಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂಬುದು ಇದೆ. ಬೇರೆ ಸಮುದಾಯಗಳಿಗೆ ಗುಡ್ ನ್ಯೂಸ್ ಕೊಟ್ಟಿರುವ ಬಸವರಾಜ್ ಬೊಮ್ಮಾಯಿ ಅವರು ನಮ್ಮ ಸಮಾಜಕ್ಕೆ ಯಾವ ಒಳ್ಳೆಯ ಸುದ್ದಿ ನೀಡುತ್ತಾರೆ ಎಂಬುದನ್ನು ಕಾಯುತ್ತಿದ್ದೇವೆ. ಅವರ ಅವಧಿಯಲ್ಲಿಆಗಬೇಕು. ಮುಂದೆ ಹೀಗೆ ಹೋದರೆ ಬೇಡಿಕೆ ಈಡೇರುವುದು ಕಷ್ಟವಾಗುತ್ತದೆ ಎಂಬುದು ನಮ್ಮ ಭಾವನೆ ಎಂದು ಹೇಳಿದರು.

ಮೂರನೇ ಪೀಠ ಸ್ಥಾಪನೆ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಜನರಲ್ಲಿ ಗೊಂದಲ ಆಗಬಹುದು. ಜನರಿಗೆ ಸತ್ಯ ಗೊತ್ತಾಗಿಯೇ ಗೊತ್ತಾಗುತ್ತೆ. ಪಾದಯಾತ್ರೆ ಮಾಡಿದ ಬಳಿಕ ಸಮಾಜ ಮತ್ತಷ್ಟು ಗಟ್ಟಿಯಾಗಿದೆ. ಪದೇ ಪದೇ ಸಚಿವ ಮುರುಗೇಶ್ ನಿರಾಣಿ ಅವರ ಬಗ್ಗೆ ಮಾತನಾಡಲು ಹೋಗಲ್ಲ. ಎಲ್ಲವೂ ನಿಮಗೆ ಗೊತ್ತಿದೆ. ಒಮ್ಮೆ ಹೇಳಿದ ಮೇಲೆ ಮತ್ತೆ ಮತ್ತೆ ಹೇಳಲು ಹೋಗಲ್ಲ. ಯಾರು ಹಿಂದಿದ್ದಾರೆ, ಮುಂದಿದ್ದಾರೆ, ಒಳಗಿದ್ದಾರೆ ಎಂಬ ಬಗ್ಗೆ ನಮಗೆ ಅಗತ್ಯ ಇಲ್ಲ. ಒಂದು ಬಾರಿ ಹೆಸರು ತೆಗೆದು ಹೇಳಬೇಕಿತ್ತು, ಹೇಳಿದ್ದೇನೆ, ಮತ್ತೆ ಮತ್ತೆ ಹೇಳಲು ಹೋಗಲ್ಲ. ನೀವೇ ವಿಶ್ಲೇಷಣೆ ಮಾಡಿ. ನಿಮಗೆ ಅಧಿಕಾರ ಇದೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಕೂಡಲಸಂಗಮದಲ್ಲಿ ಏರ್ಪಡಿಸಿದ್ದ 2ಎ ಮೀಸಲಾತಿಗೆ ಒತ್ತಾಯಿಸಿ ಪಾದಯಾತ್ರೆಯ ಒಂದು ವರ್ಷದ ತುಂಬಿದ ಕಾರ್ಯಕ್ರಮ ನಡೆದು, ಸಿಎಂ ಅವರು ಬಂದಿದ್ದರೆ ಎಲ್ಲವೂ ಒಳ್ಳೆಯದಾಗುತಿತ್ತು. ಪಾದಯಾತ್ರೆ ವರ್ಷಾಚರಣೆ ಕಾರ್ಯಕ್ರಮಕ್ಕೆ ಬರಲು ಬೊಮ್ಮಾಯಿ ಅವರು ಒಪ್ಪಿಕೊಂಡಿದ್ದರು. ಕರ್ನಾಟಕ ಕುತೂಹಲದಿಂದ ಕಾಯುತಿತ್ತು. ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಸುತ್ತೋಲೆ ಬಂತು. ದೊಡ್ಡ ಕಾರ್ಯಕ್ರಮ ನಡೆಸಬಾರದು ಎಂದು. ಜನರ ಆರೋಗ್ಯ ದೃಷ್ಟಿಯಿಂದ ಪಾದಯಾತ್ರೆಗೆ ಒಂದು ವರ್ಷದ ತುಂಬಿದ ಕಾರ್ಯಕ್ರಮವನ್ನು ಮುಂದೂಡಲಾಯಿತು. ಪಂಚಮಸಾಲಿಗಳು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button