ಶಿವಮೊಗ್ಗದಲ್ಲಿ ಕರ್ಫ್ಯೂ ಮುಂದುವರಿಕೆ : ಎಲ್ಲೆಡೆ ತೀವ್ರ ಕಟ್ಟೆಚ್ಚರ, ಶುಕ್ರವಾರದವರೆಗೆ ಶಾಲಾ ಕಾಲೇಜಿಗೆ ರಜೆ

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಭುಗಿಲೆದ್ದ ಹಿಂಸಾಚಾರದಿಂದ ನಲುಗಿದ್ದ ಶಿವಮೊಗ್ಗ ನಗರದ ಹಳೇ ಭಾಗದ ಕೆಲವು ಪ್ರದೇಶಗಳಲ್ಲಿ ಜನಜೀವನ ನಿಧಾನವಾಗಿ ಯಥಾಸ್ಥಿತಿಗೆ ಮರಳುತ್ತಿದೆ. ಶಾಂತ ಪರಿಸ್ಥಿತಿ ಕಂಡುಬರುತ್ತಿದೆಯಾದರೂ ಹಲವೆಡೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಈಗಲೂ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಕಟ್ಟೆಚ್ಚರ ವಹಿಸಿದ್ದಾರೆ.
ಗಲಭೆ ಪೀಡಿತ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ರಾತ್ರಿ ಗಸ್ತು ವ್ಯವಸ್ಥೆ ಬಿಗಿಗೊಳಿಸಲಾಗಿದೆ. ಉಳಿದಂತೆ ನಗರಾದ್ಯಂತ ಬಾರಿ ಪೊಲೀಸ್ ಪಹರೆ ಹಾಕಲಾಗಿದೆ.
ಆಯಕಟ್ಟಿನ ಹಾಗೂ ಸೂಕ್ಷ್ಮ ಜಾಗಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಮಂಗಳವಾರ ಮುಂಜಾನೆ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಲವೆಡೆ ವಾಹನಗಳಿಗೆ ಬೆಂಕಿ ಹಾಕಲಾಗಿತ್ತು. ಈ ಘಟನೆಗಳು ಹೊರತುಪಡಿಸಿದರೆ, ಉಳಿದಂತೆ ನಗರದಲ್ಲಿ ಯಾವುದೇ ಅಹಿತಕರ
ಘಟನೆಗಳು ವರದಿಯಾಗಿಲ್ಲ.
ಪರಿಸ್ಥಿತಿ ನಿಯಂತ್ರಣದಲ್ಲಿ :
ನಗರದಲ್ಲಿ ಬುಧವಾರ ಬೆಳಿಗ್ಗೆಯವರೆಗೆ ವಿಧಿಸಲಾಗಿದ್ದ ಕರ್ಫ್ಯೂವನ್ನು, ಶುಕ್ರವಾರ ಬೆಳಿಗ್ಗೆ ವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 9 ರವರಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ ಅವರು, ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಫೆ.25 ರವರೆಗೆ ನಗರ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ. ಅಗತ್ಯ ವಸ್ತು ಖರೀದಿಸುವುದಕ್ಕೆ ಬೆಳಿಗ್ಗೆ ಅವಧಿಯ 6 ರಿಂದ 9 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
ಸೆಕ್ಟರ್ ಮ್ಯಾಜಿಸ್ಟ್ರೇಟ್ :
ನಗರದಲ್ಲಿ ಕರ್ಫ್ಯೂ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ, ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಟರ್ ಮ್ಯಾಜಿಸ್ಟ್ರೇಟ್ ನೇಮಕ ಮಾಡಲಾಗಿದೆ. ಪೊಲೀಸರಿಗೆ ಅನುಕೂಲವಾಗಲು ಸೆಕ್ಟರ್ ಮ್ಯಾಜಿಸ್ಟ್ರೇಟ್ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾಹಿತಿ ನೀಡಿದ್ದಾರೆ.
ಕರ್ಪ್ಯೂ ವಿಸ್ತರಣೆಯಾಗಿರುವ ಅವಧಿಯವರೆಗೂ ಕೆಲಸಕ್ಕೆ ಹೋಗುವವರಿಗೂ ಅವಕಾಶವಿಲ್ಲ. ಆದರೆ ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ಯಾವುದೇ ಅಡ್ಡಿಯಿರುವುದಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.
ಬೆಳಿಗ್ಗೆ 9 ಗಂಟೆಯವರೆಗೆ ಕರ್ಫ್ಯೂ ಸಡಿಲಿಕೆ :
ಶುಕ್ರವಾರ ಬೆಳಿಗ್ಗೆವರೆಗೆ ಶಿವಮೊಗ್ಗ ನಗರಾದ್ಯಂತ ಕರ್ಫ್ಯೂ ವಿಸ್ತರಣೆ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ, ಬೆಳಿಗ್ಗೆ ಅವಧಿಯ 6 ರಿಂದ 9 ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗಿದೆ. ಈ ಅವಧಿಯಲ್ಲಿ ನಗರದಲ್ಲಿ ಅಗತ್ಯ ವಸ್ತುಗಳ
ಖರೀದಿಗೆ ನಾಗರೀಕರು ಮುಗಿಬಿದ್ದಿದ್ದ ದೃಶ್ಯ ಕಂಡುಬಂದಿತು. 9 ಗಂಟೆಯ ನಂತರ ಹಲವೆಡೆ ಪೊಲೀಸರು ಅಂಗಡಿ-ಮುಂಗಟ್ಟು, ವ್ಯಾಪಾರ – ವಹಿವಾಟು ಸ್ಥಗಿತಗೊಳಿಸುವಂತೆ ಸೂಚಿಸುತ್ತಿದ್ದ ದೃಶ್ಯ ಕಂಡುಬಂತು.
