Breaking NewsLatestರಾಜಕೀಯರಾಷ್ಟ್ರೀಯ

ಭದ್ರತೆಯಲ್ಲೂ ‘ಪಕ್ಷ’ಪಾತ; ಬಿಜೆಪಿ ತೊರೆದ ಬಬುಲ್ ಸುಪ್ರಿಯೊಗಿದ್ದ ಝಡ್ ಶ್ರೇಣಿ ಕಿತ್ತುಕೊಂಡ ಕೇಂದ್ರ

ನವದೆಹಲಿ: ಬಿಜೆಪಿ ಬಿಟ್ಟು ಟಿಎಂಸಿ ಸೇರಿದ ಬಬುಲ್ ಸುಪ್ರಿಯೊ ಅವರಿಗಿದ್ದ ಭದ್ರತೆಯನ್ನು ಝಡ್​ ಶ್ರೇಣಿಯಿಂದ ವೈ ಶ್ರೇಣಿಗೆ ತಗ್ಗಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ಸುಪ್ರಿಯೊಗೆ ಎರಡನೇ ಅತ್ಯುನ್ನತ ಶ್ರೇಣಿಯ ಝಡ್ ಭದ್ರತೆ ನೀಡಲಾಗಿತ್ತು. ಅವರು ಶನಿವಾರ ಟಿಎಂಸಿಗೆ ಸೇರ್ಪಡೆಯಾದ ಬೆನ್ನಲ್ಲೇ ಅದನ್ನು ವೈ ಶ್ರೇಣಿಗೆ ಬದಲಿಸಲಾಗಿದೆ.

ಕೇಂದ್ರ ಭದ್ರತೆ ಮತ್ತು ವಿಚಕ್ಷಣ ದಳದ ಶಿಫಾರಸಿನಂತೆ ಸುಪ್ರಿಯೊ ಭದ್ರತೆ ತಗ್ಗಿಸಲಾಗಿದೆ ಎಂದು ಮೂಲಗಳು ಹೇಳಿವೆ.

ವಿವಿಐಪಿಗಳು ಮತ್ತು ಹೆಚ್ಚು ಅಪಾಯವಿರುವ ವ್ಯಕ್ತಿಗಳಿಗೆ ಕೇಂದ್ರ ಭದ್ರತೆಯಡಿಯಲ್ಲಿ ಝಡ್ ಪ್ಲಸ್, ಝಡ್, ವೈ ಪ್ಲಸ್, ವೈ ಮತ್ತು ಎಕ್ಸ್ ಶ್ರೇಣಿಯ ಭದ್ರತೆ ನೀಡಲಾಗುತ್ತದೆ.

ಕಳೆದ ಜುಲೈನಲ್ಲಿ ಮೋದಿ ಸಂಪುಟ ವಿಸ್ತರಣೆ ವೇಳೆ ಸಂಪುಟದಿಂದ ಕೈಬಿಟ್ಟ ಬಳಿಕ ಸುಪ್ರಿಯೋಗೆ ಸಿಆರ್​ಪಿಎಫ್​ನ ಸಶಸ್ತ್ರ ತಂಡದ ಭದ್ರತೆ ಇತ್ತು. ಆರು ಕಮಾಂಡೋಗಳ ಬದಲಿಗೆ ಈಗ ತಗ್ಗಿದ ಭದ್ರತೆಯಲ್ಲಿ ಸುಪ್ರಿಯೋ ಪ್ರಯಾಣದ ವೇಳೆ ಇಬ್ಬರು ಸಶಸ್ತ್ರ ಸಿಬ್ಬಂದಿ ಮಾತ್ರ ಅವರ ಜೊತೆಗಿರುತ್ತಾರೆ.

ಇದರಲ್ಲಿ ಇನ್ನೂ ಬದಲಾವಣೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂಬ ಸುಳಿವನ್ನೂ ಮೂಲಗಳು ನೀಡಿವೆ. ಸುಪ್ರಿಯೊ ಈಗ ಟಿಎಂಸಿ ಸೇರಿರುವುದರಿಂದ ಅವರ ಭದ್ರತೆಯನ್ನು ಪೂರ್ತಿಯಾಗಿ ಪಶ್ಚಿಮ ಬಂಗಾಳ ಪೊಲೀಸರಿಗೆ ಒಪ್ಪಿಸುವ ಸಾಧ್ಯತೆಯೂ ಇದೆಯೆನ್ನಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button