ನಟ್ಟ ನಡುರಾತ್ರಿ ಶ್ರೀಗಂಧದ ಮರಕ್ಕೆ ಕೊಡಲಿ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ!

ಹುಬ್ಬಳ್ಳಿ: ಅವರು ಖತರ್ನಾಕ್ ಕಳ್ಳರು. ಮನೆಯೊಂದರ ಆವರಣದಲ್ಲಿದ್ದ ಶ್ರೀಗಂಧದ ಮರವೊಂದರ ಮೇಲೆ ಕಣ್ಣು ಹಾಕಿದ್ದರು. ಅದನ್ನ ಹೇಗಾದ್ರೂ ಮಾಡಿ ಕದ್ದು ಮಾರಾಟ ಮಾಡ್ಬೇಕು, ಬರೋ ದುಡ್ಡಲ್ಲಿ ಬಿಂದಾಸಾಗಿ ಎಂಜಾಯ್ ಮಾಡ್ಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದರು. ಅದಕ್ಕಾಗಿ ಸುಮಾರು ದಿನಗಳ ಕಾಲ ಮನೆಯ ಸುತ್ತಮುತ್ತಲ ಪರಿಸರವನ್ನ ವಾಚ್ ಮಾಡಿದ್ರು. ಅದ್ರಂತೆ ನೆನ್ನೆ ಮಧ್ಯರಾತ್ರಿ ಮರವನ್ನ ಕಟ್ ಮಾಡಿಯೇ ಬಿಟ್ಟಿದ್ದಾರೆ.
ಗೌದಯ ಹುಬ್ಬಳ್ಳಿಯ ಕೆಹೆಚ್ ಬಿ ಕಾಲೋನಿಯಲ್ಲಿ ವಾಸವಿರುವ ಶಿವಶಂಕರ್ ಐಹೊಳೆ ಎಂಬುವವರ ಮನೆ ಆವರಣದಲ್ಲಿ ಶ್ರೀಗಂಧ ಬೆಳೆದಿದ್ದರು. ಇದನ್ನ ನೋಡಿದ್ದ ಕಳ್ಳರು ಪ್ಲಾನ್ ಮಾಡಿದ್ದರು. ರಾತ್ರಿ ಗೂಡ್ಸ್ ವಾಹನದಲ್ಲಿ ಬಂದಿದ್ದ ಕಳ್ಳರು, ಅಕ್ಕಪಕ್ಕದವರಿಗೆ ಸಣ್ಣ ಸದ್ದು ಕೇಳದಂತೆ ಮರ ಕಟ್ ಮಾಡ್ಕೊಂಡು ಪರಾರಿಯಾಗಿದ್ದಾರೆ. ಆದ್ರೆ ಅವರ ದುರಾದೃಷ್ಟ ಎಂಬಂತೆ ಅಲ್ಲೇ ಇದ್ದ ಸಿಸಿಟಿವಿಯೊಂದು ಇವರ ಕೈಚಳಕವನ್ನ ಸೆರೆ ಹಿಡಿದಿದೆ. ಮರ ಕಟ್ ಮಾಡಿ ಅದನ್ನ ಗೂಡ್ಸ್ ವಾಹನದಲ್ಲಿ ತುಂಬಿಕೊಂಡು ಹೋಗೋ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.
ಇಂದು ಬೆಳಗಿನ ಜಾವ ಐಹೊಳೆ ಮನೆಯವರು ಹೊರಗಡೆ ಬಂದ ಸಂದರ್ಭದಲ್ಲಿ, ಮರದ ರೆಂಬೆಗಳು ಕಂಪೌಂಡ್ ಹೊರಗೆ ಹಾಗೂ ಒಳಗೆ ಬಿದಿದ್ದರುವುದನ್ನು ನೋಡಿ, ಪರಿಶೀಲಿಸಿದಾಗ ಶ್ರೀಗಂಧ ಮರ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಕಸಬಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸುದ ಪೊಲೀಸರು, ಮನೆಯ ಸಿಸಿಟಿವಿ ದೃಶ್ಯ ಸೇರಿದಂತೆ ಮರ ಇದ್ದ ಜಾಗ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
