ಖ್ಯಾತ ನಟಿ ಅತ್ಯಾಚಾರ ಯತ್ನ ಪ್ರಕರಣ: ಪೊಲೀಸರ ಕೈ ಸೇರಿದ ಮಹತ್ವದ ಸುಳಿವು

ಖ್ಯಾತ ನಟಿ ಭಾವನ ಮೆನನ್ ಅತ್ಯಾಚಾರ ಯತ್ನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ನಟ ದಿಲೀಪ್ ಕುಮಾರ್ ಪತ್ನಿಯೂ ಘಟನೆಯ ಪ್ರಮುಖ ಆರೋಪಿ ಎಂಬುದು ಸಾಕ್ಷ್ಯಾಧಾರಗಳಿಂದ ಪ್ರೂವ್ ಆಗಿದೆ.
2017ರಲ್ಲಿ ಶೂಟಿಂಗ್ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಭಾವನ ಮೆನನ್ ರನ್ನ ಅಡ್ಡ ಹಾಕಿ, ಕಾರಿಗೆ ಎಳೆದುಕೊಂಡು ಹೋಗಿ ನಟಿಯ ಮೇಲೆ ಅತ್ಯಾಚಾರದ ಯತ್ನ ಮಾಡಲಾಗಿತ್ತು. ಇದು ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ಘಟನೆ ಸಂಬಂಧ ಪ್ರಕರಣದ ಪ್ರಮುಖ ಆರೋಪಿ ದಿಲೀಪ್ ಕುಮಾರ್ ಹಾಗೂ ರೌಡಿ ಪಲ್ಸರ್ ಸುನಿಯನ್ನ ಪೊಲೀಸರು ಬಂಧಿಸಿದ್ದಾರೆ. ಇದೀಗ ವಿಚಾರಣೆ ಚುರುಕುಗೊಂಡಿದ್ದು ಪೊಲೀಸರು ವಶಪಡಿಸಿಕೊಂಡಿರುವ ಸಾಕ್ಷಿಯಲ್ಲಿ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಕೂಡ ಭಾಗಿಯಾಗಿದ್ದಾರೆ ಅನ್ನೋದು ತಿಳಿದುಬಂದಿದೆ.
ಕಾವ್ಯ ಮಾಧವನ್ ನಟಿ ಭಾವನ ಮೆನನ್ ಗೆ ತೊಂದರೆ ಕೊಡುವಂತೆ ದಿಲೀಪ್ ಕುಮಾರ್ ಸಂಬಂಧಿ ಶರತ್ ಅವರೊಟ್ಟಿಗೆ ಫೋನಿನಲ್ಲಿ ಮಾತನಾಡಿರೋ ಆಡಿಯೋ ಪೊಲೀಸರಿಗೆ ಸಿಕ್ಕಿದೆ.
ನಟ ದಿಲೀಪ್ ಕುಮಾರ್ ಹಾಗೂ ಕಾವ್ಯಾ ನಡುವೆ ಸಂಬಂಧ ಇರುವುದನ್ನು ಗಮನಿಸಿದ್ದ ಭಾವನ ಮೆನನ್ ಅದನ್ನು ಆಗ ದಿಲೀಪ್ ಪತ್ನಿ ಆಗಿದ್ದ ಮಂಜು ವಾರಿಯರ್ಗೆ ತಿಳಿಸಿದ್ದರು. ಇದರಿಂದಾಗಿ ದಿಲೀಪ್ ಹಾಗೂ ಕಾವ್ಯಾ ಸಾಕಷ್ಟು ಮುಜುಗರ ಅನುಭವಿಸಬೇಕಾಯಿತು. ಹೀಗಾಗಿ ಭಾವನ ಮೆನನ್ ಗೆ ತೊಂದರೆ ಕೊಡಬೇಕೆಂದು ದಿಲೀಪ್ ಹಾಗೂ ಕಾವ್ಯ ಸೇರಿ ಈ ಸಂಚು ರೂಪಿಸಿದ್ದರು.
