ಮನೆ ಮುಂದೆ ಕುಳಿತಿದ್ದವರನ್ನ ಅರೆಸ್ಟ್ ಮಾಡಿದ ಪೊಲೀಸರು: ಠಾಣೆ ಮುಂದೆ ಪ್ರತಿಭಟನೆ

ಹುಬ್ಬಳ್ಳಿ: ರಾತ್ರಿ ವೇಳೆ ಮನೆಯ ಮುಂಭಾಗದಲ್ಲಿ ನಿಂತಿರುವ ಸಾರ್ವಜನಿಕರನ್ನು ಸುಖಾಸುಮ್ಮನೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ, ಹಳೇ ಹುಬ್ಬಳ್ಳಿಯ ಹಿರಿಯರು, ಮುಸ್ಲಿಂ ಮುಖಂಡರು ರಾತ್ರೋ ರಾತ್ರಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಿರುವ ಘಟನೆ ನಡೆದಿದೆ.
ಹಳೇ ಹುಬ್ಬಳ್ಳಿಯ ನಿವಾಸಿಗಳು ರಾತ್ರಿ ವೇಳೆ ಹೊರಗಡೆ ಕುಳಿತುಕೊಂಡಿರುವ ವಿಚಾರಕ್ಕಾಗಿ, ಪೊಲೀಸರು ಏಕಾಏಕಿ ಸುಮಾರು 100 ಕ್ಕಿಂತ ಹೆಚ್ಚು ಜನರನ್ನು ಕಸಬಾ ಠಾಣೆಯ ಪೊಲೀಸ್ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಈ ವಿಚಾರ ತಿಳಿದ ಹಳೇ ಹುಬ್ಬಳ್ಳಿಯ ಹಿರಿಯ ನಿವಾಸಿಗಳು, ಮುಸ್ಲಿಂ ಮುಖಂಡರು ಎಐಎಂಐಎಂ ಪಕ್ಷದ ಕಾರ್ಯಕರ್ತರು ಕಸಬಾ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಜಮಾವಣೆಗೊಂಡು ಬೀದಿಗೆ ಇಳಿದು
ತಡ ರಾತ್ರಿಯೇ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ಇನ್ನೂ ಪ್ರತಿಭಟನೆ ತೀವ್ರಗೊಳ್ಳುತ್ತಿದಂತೆ ಎಚ್ಚೆತ್ತುಕೊಂಡ ಠಾಣೆಯ ಪೊಲೀಸ್ ಅಧಿಕಾರಿಗಳು ಅರೆಸ್ಟ್ ಆದಂತಹ ನಿವಾಸಿಗಳನ್ನು ಬಿಟ್ಟು ಕಳುಹಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಮನೆಯ ಮುಂಭಾಗದಲ್ಲಿ ಕುಳಿತುಕೊಳ್ಳುವ ವಿಚಾರಕ್ಕಾಗಿ
ಮತ್ತೆ ಏನಾದರೂ ಪೊಲೀಸರು ಸಾರ್ವಜನಿಕರಿಗೆ ಹಿಂಸೆ ನೀಡಿದರೆ, ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಈಗ ಠಾಣೆಯ ಮುಂದೆ ಪ್ರತಿಭಟನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕಮಿಷನರ್ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
