ಏಳು ವರ್ಷ; ಕೇಂದ್ರ ಸರ್ಕಾರ ಜಾಹೀರಾತಿಗೆ ಖರ್ಚು ಮಾಡಿದ್ದು 7,988 ಕೋಟಿ

ಎಂ ಹೈದರ್
ಕೇಂದ್ರ ಸರ್ಕಾರ ತನ್ನ ವೈಪಲ್ಯಗಳನ್ನು ಮರೆ ಮಾಚಲು ಕಳೆದ ಏಳು ವರ್ಷಗಳಿಂದ 7988 ಕೋಟಿ ರೂಪಾಯಿಗಳನ್ನು ಜಾಹಿರಾತುಗಳಿಗಾಗಿ ವೆಚ್ಚ ಮಾಡಿದೆ. ಅಂದರೆ ಪ್ರತಿ ನಿಮಿಷಕ್ಕೆ 22137 ರೂಪಾಯಿಗಳು ಜಾಹಿರಾತಿಗಾಗಿ ಖರ್ಚು ಮಾಡುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರದ ಜಾಹೀರಾತುಗಳು ಸೇರಿಲ್ಲ ಎಂಬುದು ನೆನಪಿರಲಿ.

ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಎಲ್ಲಾ ಮಾಧ್ಯಮಗಳಲ್ಲಿ ಪುಟಗಟ್ಟಲೆ ಸರ್ಕಾರದ ಯೋಜನೆಗಳ ಬಗೆಗಿನ ಜಾಹಿರಾತುಗಳನ್ನು ಆಗಾಗ ನೋಡುತ್ತಲೇ ಇರುತ್ತೇವೆ. ಆದರೆ ಇವುಗಳಿಗೆ ಖರ್ಚು ಮಾಡುವ ಕೋಟಿ ಕೋಟಿ ಹಣ ಸರ್ಕಾರದ ಬೊಕ್ಕಸದಿಂದ ಭರಿಸಲಾಗುತ್ತದೆ. ಅಂದರೆ ಅರ್ಥಾತ್ ಜನರ ತೆರಿಗೆ ಹಣವನ್ನು ಅನಗತ್ಯವಾಗಿ ಪ್ರಚಾರ ಮಾಡಲು ಖರ್ಚು ಮಾಡಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಅವಶ್ಯಕತೆ ಇಲ್ಲದ ಇಂತಹ ಪ್ರಚಾರ ಸರ್ಕಾರ, ತನ್ನ ವಿಫಲತೆಯನ್ನು ಮರೆಮಾಚಲು ಕಂಡುಕೊಂಡ ಸುಲಭ ಮಾರ್ಗವಾಗಿದೆ.

ಮಾಧ್ಯಮಗಳಲ್ಲಿ ಪ್ರಕಟವಾದ ಜಾಹೀರಾತಿನಂತೆ ಸರ್ಕಾರದ ಪಟ್ಟಿಯಲ್ಲಿ ಇರುವ ಯೋಜನೆಗಳೆಲ್ಲ ಕಾರ್ಯರೂಪಕ್ಕೆ ಬಂದಿದ್ದರೆ ಭಾರತದಲ್ಲಿ ಒಬ್ಬರು ಕೂಡ ನಿರುದ್ಯೋಗಿಗಳು ಇರುತ್ತಿರಲಿಲ್ಲ. ಎಳ್ಳುಕಾಳಿನಷ್ಟೂ ಸಮಸ್ಯೆಗಳು ಇರುತ್ತಿರಲಿಲ್ಲ. ಆದರೆ ಕಾರ್ಯಕ್ರಮಗಳನ್ನು ಆಯೋಜಿಸಿ ಹಲವು ಯೋಜನೆಗಳಿಗೆ ಹೊಸ ಹೊಸ ನಾಮಕರಣ ಮಾಡಿ ಅದನ್ನು ಜಾಹಿರಾತು ಪ್ರಚಾರ ಮಾಡುವುದಕ್ಕೆ ಮಾತ್ರ ಸೀಮಿತಗೊಳಿಸಿ ಸರ್ಕಾರ ಜನರಲ್ಲಿ ಭ್ರಮೆಯನ್ನು ಸೃಷ್ಟಿಸಿ ಮುಂದಡಿ ಇಡುತ್ತಿದೆ.
ಮಾಧ್ಯಮಗಳಲ್ಲಿ ಮಾತ್ರ ಈ ಯೋಜನೆಗಳು ದೊಡ್ಡದಾಗಿ ಬಿಂಬಿತವಾಗುತ್ತದೆ. ಇದರಿಂದ ದೇಶದ ಬೊಕ್ಕಸಕ್ಕೆ ನಷ್ಟವಲ್ಲದೆ ಜನತೆಗೆ ಯಾವುದೇ ಪ್ರಯೋಜನ ಇಲ್ಲ. ಯೋಜನೆಗಳನ್ನು ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು ಚಪ್ಪಾಳೆ ತಟ್ಟುವುದರಲ್ಲಿ ಈ ಯೋಜನೆಗಳು ಮರೆತುಹೋಗುತ್ತವೆ.

ನಮಾಮಿ ಗಂಗಾ ಯೋಜನೆಯನ್ನೇ ತೆಗೆದುಕೊಂಡರೆ, ಕಳೆದ ಏಳು ವರ್ಷಗಳಲ್ಲಿ ಸುಮಾರು ಹಂತ ಹಂತವಾಗಿ ಇದುವರೆಗೂ 12 ಸಾವಿರ ಕೋಟಿ ಗಂಗಾನದಿಯ ಸ್ವಚ್ಛತೆಗೆ ಖರ್ಚು ಮಾಡಲಾಗಿದೆ. ಅದರ ಜಾಹೀರಾತಿಗಾಗಿಯೇ ಸುಮಾರು 70 ಕೋಟಿ ಖರ್ಚು ಮಾಡಲಾಗಿದೆ. ಆದರೆ ಗಂಗಾನದಿ ಎಷ್ಟು ಸ್ವಚ್ಛವಾಗಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಸ್ವಚ್ಚತೆಯ ಮಾತಿರಲಿ ಗಂಗಾನದಿಯಲ್ಲಿ ತೇಲಿದ ಹೆಣಗಳ ಲೆಕ್ಕ ಕೂಡ ಸರ್ಕಾರದ ಬಳಿ ಇಲ್ಲ ಎಂಬುದು ಕಟು ವಾಸ್ತವ.
ಬಿಜೆಪಿಯ ಪ್ರಮುಖ ಯೋಜನೆಯಾದ ಗಂಗಾನದಿಯನ್ನು ಸ್ವಚ್ಛಗೊಳಿಸುವ ನಮಾಮಿ ಗಂಗಾ ಯೋಜನೆ ಏನಾದೆ ಎಂಬುದನ್ನು ಅವಲೋಕಿಸಿದರೆ, ಉಳಿದ 370 ಯೋಜನೆಗಳನ್ನು ಊಹಿಸುವುದೂ ಕಷ್ಟ. ಸ್ವನಿಧಿ ಯೋಜನೆ, ಕಿಸಾನ್ ಮಾನ್ ಧನ್ ಯೋಜನೆ, ಸ್ವದೇಶ್ ದರ್ಶನ್ ಯೋಜನೆ, ಬಾಲಿಕಾ ಅನುದಾನ್ ಯೋಜನೆ, ಡ್ರೈವಿಂಗ್ ಟ್ರೈನಿಂಗ್ ಸೆಂಟರ್ ಸ್ಕೀಮ್ ಯೋಜನೆ, ಹೀಗೆ ನೂರಾರು ಯೋಜನೆಗಳಿಗೆ ಜಾಹೀರಾತು ನೀಡಿ ಚಾಲನೆ ನೀಡಲಾಗಿದೆ. ಇದರಲ್ಲಿ ಶೇಕಡಾ 70 ರಷ್ಟು ಯೋಜನೆಗಳು ಕೇವಲ ಹೆಸರಿಗಷ್ಟೆ ಸೀಮಿತವಾಗಿದೆ.

ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ವಾರಣಾಸಿಗೆ ಬಂದಾಗ “ನಾನಾಗಿ ಇಲ್ಲಿಗೆ ಬಂದಿಲ್ಲ, ಯಾರೂ ಕೂಡ ನನ್ನನ್ನು ಇಲ್ಲಿಗೆ ಕಳಿಸಿಲ್ಲ. ಬದಲಾಗಿ ಖುದ್ದು ಗಂಗಾಮಾತೆಯೇ ನನ್ನನ್ನು ಇಲ್ಲಿಗೆ ಕರೆದಿದ್ದಾಳೆ” ಎಂದು ಭಾವುಕರಾಗಿ ಹೇಳಿದ್ದರು ಮತ್ತು ಇಲ್ಲಿಂದ ಲೋಕಸಭಾ ಚುನಾವಣೆ ಯಲ್ಲಿ ಗೆದ್ದು ಪ್ರಧಾನ ಮಂತ್ರಿ ಪಟ್ಟವನ್ನು ಅಲಂಕರಿಸಿದ್ದರು ಎಂಬುದು ಇಲ್ಲಿ ಸ್ಮರಣೀಯ. ಅಂತಹ ಗಂಗಾನದಿಯ ಯೋಜನೆಯನ್ನೇ ಹಳ್ಳ ಹಿಡಿಸಿದ್ದಾರೆಂದರೆ ಉಳಿದ ಯೋಜನೆಗಳ ಬಗ್ಗೆ ಕಾಶಿ ವಿಶ್ವನಾಥನೇ ಬಲ್ಲ.
ಕಳೆದ ಎಪ್ಪತ್ತು ವರ್ಷಗಳಲ್ಲಿ ಬಿಜೆಪಿಯ ಅಧಿಕಾರ ಅವಧಿಯನ್ನು ಬಿಟ್ಟು ಉಳಿದ ಅವಧಿಯಲ್ಲಿ ಸರ್ಕಾರದ ಯೋಜನೆಗಳ ಪ್ರಚಾರದ ಜಾಹೀರಾತಿಗೆ ಆಯಾ ಅವಧಿಯ ಸರ್ಕಾರಗಳು ವೆಚ್ಚ ಮಾಡಿದ ಹಣವೆಷ್ಟು ಮತ್ತು ತನ್ನ ಅವಧಿಯಲ್ಲಿ ಜಾಹಿರಾತಿಗೆ ಖರ್ಚು ಮಾಡಿದ ಹಣವೆಷ್ಟು ಎಂಬುದ ಬಗ್ಗೆ ಪ್ರತ್ಯೇಕವಾಗಿ ಲೆಕ್ಕ ಕೊಡುವ ದೈರ್ಯ ಕೇಂದ್ರ ಸರ್ಕಾರಕ್ಕೆ ಇದೆಯೇ?
