Breaking NewsLatestರಾಜ್ಯರಾಷ್ಟ್ರೀಯಸುದ್ದಿ

ಇಂದು ಆರ್​ಬಿಐ ಹಣಕಾಸು ನೀತಿ ಸಮಿತಿ ವಿಶೇಷ ಸಭೆ

ನವದೆಹಲಿ: ಚಿಲ್ಲರೆ ಹಣದುಬ್ಬರ ನಿಯಂತ್ರಿಸಲು ವಿಫಲವಾಗಿರುವುದಕ್ಕೆ ಸಂಬಂಧಿಸಿ ವರದಿ ಸಿದ್ಧಪಡಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂದು ಹಣಕಾಸು ನೀತಿ ಸಮಿತಿಯ ವಿಶೇಷ ಸಭೆ ನಡೆಸಲಿದೆ.

ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಚಿಲ್ಲರೆ ಹಣದುಬ್ಬರ ಹೆಚ್ಚಳದ ಮಧ್ಯೆಯೇ ಆರ್​ಬಿಐ ಎಂಪಿಸಿ ವಿಶೇಷ ಸಭೆ ನಡೆಸಲಿದೆ. ಸತತ ಮೂರು ತ್ರೈಮಾಸಿಕಗಳಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 6ಕ್ಕಿಂತ ಕೆಳಗಿನ ಮಟ್ಟದಲ್ಲಿ ಕಾಯ್ದುಕೊಳ್ಳುವಲ್ಲಿ ಆರ್​ಬಿಐ ವಿಫಲವಾಗಿದೆ. ಹೀಗಾಗಿ ತನ್ನ ವೈಫಲ್ಯಕ್ಕೆ ಸಂಬಂಧಿಸಿದ ವರದಿ ಸಿದ್ಧಪಡಿಸಬೇಕಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 45 ಝಡ್​ಎನ್​ ಅಡಿಯಲ್ಲಿ ಹಣಕಾಸು ನೀತಿ ಸಮಿತಿಯ ಹೆಚ್ಚುವರಿ ಸಭೆ ನಡೆಯಲಿದೆ. ಸತತ 9 ತಿಂಗಳುಗಳಿಂದ ಏರಿಕೆಯ ಹಾದಿಯಲ್ಲಿರುವ ಚಿಲ್ಲರೆ ಹಣದುಬ್ಬರ ಸೆಪ್ಟೆಂಬರ್ ತಿಂಗಳಲ್ಲಿ ಶೇಕಡಾ 7.4ಕ್ಕೆ ಹೆಚ್ಚಿತ್ತು. ಹೆಚ್ಚುತ್ತಿರುವ ಹಣದುಬ್ಬರ ತಡೆಗೆ ಆರ್​ಬಿಐ ಅನೇಕ ಕ್ರಮಗಳನ್ನೂ ಕೈಗೊಂಡಿತ್ತು. ಸತತವಾಗಿ ನಾಲ್ಕು ಬಾರಿ ರೆಪೊ ದರ ಹೆಚ್ಚಿಸಿದ್ದೂ ಅವುಗಳಲ್ಲೊಂದು.

ಸೆಪ್ಟೆಂಬರ್ 30ರಂದು ಪ್ರಕಟಿಸಿದ ಹಣಕಾಸು ನೀತಿಯಲ್ಲಿ ಆರ್​ಬಿಐ ರೆಪೊ ದರವನ್ನು ಶೇಕಡಾ 0.50 ಹೆಚ್ಚಿಸಿ, 5.9ಕ್ಕೆ ನಿಗದಿಪಡಿಸಿತ್ತು. ಇದರೊಂದಿಗೆ ಮೇ ತಿಂಗಳ ನಂತರ ಈವರೆಗೆ ಆರ್​ಬಿಐ ಒಟ್ಟಾರೆಯಾಗಿ 190 ಮೂಲಾಂಶದಷ್ಟು ರೆಪೊ ದರ ಹೆಚ್ಚಿಸಿದಂತಾಗಿತ್ತು.

ಇಷ್ಟೆಲ್ಲ ಕ್ರಮಗಳ ಹೊರತಾಗಿಯೂ ಹಣದುಬ್ಬರ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಆರ್​ಬಿಐ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ. ಜತೆಗೆ, ಹಣದುಬ್ಬರ ನಿಯಂತ್ರಿಸಲು ಮುಂದೆ ಏನು ಕ್ರಮ ಕೈಗೊಳ್ಳಲಿದೆ ಎಂಬ ವಿವರವನ್ನೂ ನೀಡಬೇಕಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ ’45 ಝಡ್​ಎನ್’ ಪ್ರಕಾರ ಸತತ ಮೂರು ತ್ರೈಮಾಸಿಕಗಳವರೆಗೆ ಹಣದುಬ್ಬರವನ್ನು ಮಿತಿಯೊಳಗೆ ಇರಿಸಲು ಸಾಧ್ಯವಾಗದಿದ್ದರೆ, ಅದಕ್ಕೆ ಕಾರಣ ಏನು ಎಂಬುದನ್ನು ಆರ್‌ಬಿಐ ಕೇಂದ್ರಕ್ಕೆ ತಿಳಿಸಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button