
ಬೆಂಗಳೂರು: ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದರೂ ಅದಕ್ಕೆ ಸ್ಪಂದಿಸದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಟಾಂಗಾ ಜಾಥಾ ನಡೆಸುವ ಮೂಲಕ ಶುಕ್ರವಾರ ಛಡಿಯೇಟು ಕೊಟ್ಟರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ನೇತೃತ್ವದಲ್ಲಿ ಹಿಂದೆ ಎತ್ತಿನ ಗಾಡಿ, ಸೈಕಲ್ ಜಾಥಾ ನಡೆಸಿದ್ದ ಕಾಂಗ್ರೆಸ್ ಇಂದು ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಟಾಂಗಾ ಜಾಥಾ ನಡೆಸಿತು.
ತನ್ನ ಜನವಿರೋಧಿ ನೀತಿ ಮೂಲಕ ಜನರ ಬದುಕು ದುಸ್ಥಿತಿಗೆ ನೂಕುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಮುಖಂಡರು ಘೋಷಣೆ ಹಾಕಿದರು.
ಸರಕಾರ ಎಷ್ಟೇ ಭಂಡತನ ಪ್ರದರ್ಶಿಸಿದರೂ ಕಾಂಗ್ರೆಸ್ ತನ್ನ ಜನಪರ ಹೋರಾಟ ಮುಂದುವರೆಸುತ್ತದೆ ಎಂಬ ಸಂದೇಶ ರವಾನಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಯ್ಯ, ಬೆಲೆ ಏರಿಕೆ ವಿರುದ್ಧ ಅಂದು ಎತ್ತಿನಗಾಡಿ ಮೂಲಕ ಪ್ರತಿಭಟನೆ ನಡೆಸಿದೆವು, ಬಳಿಕ ಸೈಕಲ್ ಜಾಥಾ ಮೂಲಕ ಅಧಿವೇಶಕ್ಕೆ ಬಂದು ಪ್ರತಿಭಟನೆ ನಡೆಸಿದರು. ಆದರೂ ಈ ಸರ್ಕಾರ ಜನರ ಸಂಕಷ್ಟ ಆಲಿಸುತ್ತಿಲ್ಲ. ದಪ್ಪ ಚರ್ಮದ ಸರ್ಕಾರ ಇದು. ಹಾಗಾಗಿ ಮತ್ತೆ ಮತ್ತೆ ನಾವು ಹೋರಾಟ ಮಾಡುತ್ತಿದ್ದೇವೆ. ಇಂದು ಟಾಂಗಾ ಪ್ರತಿಭಟನೆ ಮಾಡುವ ಮೂಲಕ ವಿಧಾನಸೌಧಕ್ಕೆ ಬಂದಿದ್ದೇವೆ ಎಂದರು.
ದಿನೇ ದಿನೆ ಇಂಧನ ಹಾಗೂ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದರ ವಿರುದ್ಧ ಕಾಂಗ್ರೆಸ್ ಪಕ್ಷ ನಿರಂತರವಾಗಿ ಸಮರ ಸಾರುತ್ತಲೇ ಬಂದಿದೆ. ಈ ಹಿಂದೆ ಸೈಕಲ್ ಜಾಥಾ ನಡೆಸಿ, ನಂತರ ರಾಜ್ಯಾದ್ಯಂತ 5000 ಪೆಟ್ರೋಲ್ ಬಂಕ್ ಗಳ ಮುಂದೆ ಐದು ದಿನಗಳ ಕಾಲ ‘100 ನಾಟೌಟ್’ ಪ್ರತಿಭಟನೆ ಮಾಡಿತ್ತು. ಈ ಬಾರಿ ಮುಂಗಾರು ಅಧಿವೇಶನ ಆರಂಭವಾದ ನಂತರ 10 ದಿನಗಳ ಅಂತರದಲ್ಲಿ ಸೈಕಲ್ ಜಾಥಾ, ಎತ್ತಿನಗಾಡಿ ಯಾತ್ರೆ ಮಾಡಿದ್ದ ಕಾಂಗ್ರೆಸ್ ನಾಯಕರು ಇಂದು ಟಾಂಗಾ ಜಾಥಾ ಮೂಲಕ ಪ್ರತಿಭಟನೆ ಮಾಡಿದ್ದಾರೆ.



