ಮೋಸಗಾರ ನರಿ

ಒಂದು ಊರಿನಲ್ಲಿ ಜಮೀನ್ದಾರನೊಬ್ಬನಿಗೆ ಸಾಕು ನಾಯಿಯೊಂದಿತ್ತು. ಚೆನ್ನಾಗಿ ತಿಂದು ಕೊಬ್ಬಿದ್ದ ನಾಯಿಗೆ ತನ್ನ ಅದೃಷ್ಟದ ಬಗ್ಗೆ ಅಹಂಕಾರವಿತ್ತು. ದಿನಾ ಹೊತ್ತು ಹೊತ್ತಿಗೆ ಸ್ನಾನ, ಮಾಂಸದ ಊಟ, ಮಲಗುವುದಕ್ಕೆ ಮೆತ್ತನೆಯ ಹಾಸಿಗೆ ಇತ್ತು. ತನ್ನ ಸಹಚರರ ಜೊತೆ ಹೊರಗಡೆ ತನಗಿರುವ ಸವಲತ್ತನ್ನು ಹೇಳಿಕೊಂದು ಬೀಗುತ್ತಿತ್ತು. ಒಂದು ದಿನ ನಾಯಿಗೆ ಊರ ಪಕ್ಕದಲ್ಲಿರುವ ಅರಣ್ಯವನ್ನು ನೋಡಬೇಕೆನಿಸಿತು. ಅದಕ್ಕಾಗಿ ಕಾಡಿನತ್ತ ಪಯಣ ಬೆಳೆಸಿತು.
ಕಾಡಿನಲ್ಲಿ ಸ್ವಲ್ಪ ಹೊತ್ತು ಅತ್ತಿತ್ತ ಅಲೆಯಿತು. ಏನು ಮಾಡಬೇಕೆಂದು ತೋಚದೆ ಮತ್ತೆ ಊರ ಕಡೆ ಹಿಂದಿರುಗಬೇಕೆಂದು ಹೊರಟಿತು. ಅಷ್ಟರಲ್ಲಿ ಅದಕ್ಕೆ ನರಿಯೊಂದು ಎದುರಾಯಿತು. ನರಿಯು ‘ಅಣ್ಣಾ ಎಲ್ಲಿಂದ ಬಂದಿದ್ದೀಯಾ? ಇಷ್ಟು ದಿನವಾದರು ನಾನು ನಿನ್ನನ್ನು ಈ ಕಾಡಿನಲ್ಲಿ ನೋಡೆ ಇಲ್ಲವಲ್ಲ’ ಎಂದು ಹೇಳಿತು. ಅದಕ್ಕೆ ನಾಯಿ ನಾನು ಊರ ಜಮೀನ್ದಾರನ ಮನೆ ಕಾಯುವವನು, ನಾನು ನಿನ್ನಂತೆ ಬೇಟೆಯಾಡಿ ಆಹಾರ ಕಂಡುಕೊಳ್ಳಬೇಕಾಗಿಲ್ಲ ಎಂದು ತನಗಿರುವ ಎಲ್ಲಾ ಸೌಕರ್ಯದ ಬಗ್ಗೆ ಹೇಳಿತು. ನರಿಗೆ ಇದೆಲ್ಲಾ ತಿಳಿದು ಆಶ್ಚರ್ಯವಾಯಿತು. ಅದು ತನ್ನನ್ನೂ ನಿಮ್ಮ ಯಜಮಾನರ ಮನೆಗೆ ಕರೆದುಕೊಂಡು ಹೋಗು ಎಂದು ಕೇಳಿಕೊಂಡಿತು. ಅದಕ್ಕೆ ಒಪ್ಪಿದ ನಾಯಿ ನರಿಯೊಂದಿಗೆ ಊರ ಕಡೆಗೆ ಹೊರಡಿತು. ಮನೆ ತಲುಪುತ್ತಲೇ ನಾಯಿಯು ನರಿಯೊಂದಿಗೆ ’ನೀನು ಇಲ್ಲಿಯೇ ಕಟ್ಟಿಗೆಯ ಅಡಿಯಲ್ಲಿ ಅವಿತಿಕೊಂಡಿರು, ನನ್ನ ಯಜಮಾನ ನಿನ್ನುನ್ನು ನೋಡಿದರೆ ಕೊಂದೇಬಿಡುತ್ತಾನೆ, ನಾನು ಹೋಗಿ ನಿನಗೆ ಊಟ ತರುತ್ತೇನೆ’ ಎಂದು ಹೇಳಿತು.
ನಾಯಿ ಹೋಗಿ ನರಿಗೆ ಮಾಂಸದೂಟ ತಂದಿತು. ಎಷ್ಟು ದಿನವೆಂದು ಹೀಗೆ ಅವಿತುಕೊಂಡು ಬದುಕುತ್ತೀಯಾ, ನನ್ನ ಯಜಮಾನರು ಕಂಡರೆ ನಿನ್ನ ಕತೆ ಮುಗಿದಂತೆ. ಆದ್ದರಿಂದ ನೀನು ಕಾಡಿಗೆ ಹೋಗು ಎಂದಿತು. ಅದಕ್ಕೆ ನರಿ ಸರಿ ಹಾಗೆಯೇ ಆಗಲಿ, ಆದರೆ ನಾಳೆ ಬೆಳಗ್ಗೆ ಹೋಗುತ್ತೇನೆ. ಈ ರಾತ್ರಿ ಇಲ್ಲಿಯೇ ಇರುತ್ತೇನೆ ಎಂದಿತು. ಮರುದಿನ ಬೆಳಗಾದ ಮೇಲೆ ನಾಯಿ ನರಿಯನ್ನು ಹುಡುಕಿತು. ನರಿ ಅದಾಗಲೆ ಹೊರಟು ಹೊರಟು ಹೋಗಿತ್ತು. ನಾಯಿ ಪೀಡೆ ಈಗಲಾದರು ತೊಲಗಿತಲ್ಲ ಎಂದು ನಿಟ್ಟುಸಿರು ಬಿಟ್ಟಿತು. ಅಷ್ಟರಲ್ಲಿ ಮನೆಯ ಯಜಮಾನ ಕೋಪದಿಂದ ದೊಡ್ಡ ದೊಣ್ಣೆ ಹಿಡಿದು ಬಂದು ನೀನು ತಿಂದ ಮನೆಗೆ ದ್ರೋಹ ಬಗೆಯುವವನು, ವಿಶ್ವಾಸಘಾತಕ ಕೆಲಸ ಮಾಡಿದ್ದೀಯ. ಹೊಟ್ಟೆ ತುಂಬ ಊಟ ಹಾಕಿದರು ರಾತ್ರಿ ನನ್ನ ಎಲ್ಲಾ ಕೋಳಿಗಳನ್ನು ತಿಂದಿದ್ದೀಯಾ. ನಿನಗೆ ನನ್ನ ಮನೆಯಲ್ಲಿ ಇರುವ ಯೋಗ್ಯತೆ ಇಲ್ಲ, ಮನೆಯಿಂದ ತೊಲಗು ಎಂದು ಕೂಗಾಡಿದ. ನೀಚ ನರಿಯ ಸಹವಾಸ ಮಾಡಿ ಸುಖದ ಸುಪತ್ತಿಗೆಯಲ್ಲಿ ತೇಲುತ್ತಿದ್ದ ನಾಯಿ ಎಲ್ಲವನ್ನು ಕ್ಷಣಮಾತ್ರದಲ್ಲಿ ಕಳೆದುಕೊಂಡಿತು.
ನೀತಿ: ಸುಖದ ವೈಭೋಗವಿದೆಯೆಂದು ತುಂಬಾ ಬೀಗಬಾರದು.




