ಮಹಾತ್ಮರ ಪರೀಕ್ಷೆ

ಒಬ್ಬ ವಿದ್ಯಾವಂತ ಬಾಲಕ. ಇನ್ನೊಬ್ಬ ವಿದ್ಯಾವಂತನಲ್ಲದ ಬಾಲಕ. ಇಬ್ಬರೂ ಒಮ್ಮೆ ಜ್ಞಾನ ದೀಕ್ಷೆ ಪಡೆಯುವುದಕ್ಕಾಗಿ ಆಧ್ಯಾತ್ಮ ಸಿದ್ಧಿ ಪಡೆದ ಮಹಾತ್ಮರ ಬಳಿ ಬಂದರು. ನಮಗೆ ಜ್ಞಾನ ದೀಕ್ಷೆ ಕರುಣಿಸಿ ಎಂದು ಗುರುಗಳಲ್ಲಿ ಬೇಡಿಕೊಂಡರು. ಆಗ ಮಹಾತ್ಮರು ಇಬ್ಬರಿಗೂ ಎರಡು ಪಕ್ಷಿಗಳನ್ನು ಕೊಟ್ಟು ಇಬ್ಬರೂ ಬೇರೆ ಬೇರೆಯಾಗಿ ಹೋಗಿ ಯಾರೂ ನೋಡದ ಸ್ಥಳದಲ್ಲಿ ಇವುಗಳನ್ನು ಕೊಂದು ತಿನ್ನಿ ಎಂದರು.
ಆಗ ಅವಿದ್ಯಾವಂತ ಬಾಲಕ ಥಟ್ಟನೆ ಒಂದು ಮರದ ಹಿಂದೆ ಹೋಗಿ ಆ ಹಕ್ಕಿಯ ಕತ್ತನ್ನು ಹಿಸುಕಿ ಕೊಂದು ತಿಂದ. ಇನೊಬ್ಬ ಬಾಲಕ ನಿರ್ಜನ ಪ್ರದೇಶಕ್ಕೆ ಹೋದ. ಆಗ ಅವನಿಗೆ ಒಂದು ಯೋಚನೆ ಬಂತು ನಾನು ಈ ಹಕ್ಕಿಯನ್ನು ಕೊಲ್ಲಲು ಹೋದರೆ ಇದು ನನ್ನನ್ನೇ ನೋಡುತ್ತಿದೆ. ನಾನು ಇದನ್ನು ನೋಡುತ್ತಿದ್ದೇನೆ. ನೋಡುವವರು ನಾವಿಬ್ಬರಾದರೂ ಮೂರನೆಯವನಾದ ಪರಮಾತ್ಮ ನಮ್ಮಿಬ್ಬರನ್ನೂ ನೋಡುತ್ತಿದ್ದಾನೆ.
ಮಹಾತ್ಮರು ನಮಗೆ ಆಜ್ಞೆ ಮಾಡಿರುವುದು ಯಾರೂ ನೋಡದ ಕಡೆ ಕೊಲ್ಲಿ ಎಂದಿದ್ದಾರೆ. ಹೀಗೆ ಯೋಚಿಸಿ ಕೊನೆಗೆ ಆ ಹಕ್ಕಿಯನ್ನು ಹಾಗೆ ತಂದಿಟ್ಟು ’ಮಹಾತ್ಮರೇ ಯಾರೂ ನೋಡದಿರುವಂತಹ ಸ್ಥಳ ನನಗೆಲ್ಲಿಯೂ ಕಾಣಲಿಲ್ಲ. ಪರಮಾತ್ಮನು ಎಲ್ಲಾ ಕಡೆಯು ಇದ್ದು ನೋಡುತ್ತಿದ್ದಾನೆ ಅಲ್ಲವೆ? ಎಂದನು. ಮಹಾತ್ಮರು ಅವನ ಮಾನವೀಯತೆ ಹಾಗೂ ದೇವರಲ್ಲಿರುವ ನಂಬಿಕೆಯನ್ನು ಮೆಚ್ಚಿ ಅವನಿಗೆ ಜ್ಞಾನ ದೀಕ್ಷೆಯನ್ನು ನೀಡಿದರು.
ಇನ್ನೊಬ್ಬ ಬಾಲಕನಿಗೆ ನೀನು ದೀಕ್ಷೆಗೆ ಅರ್ಹನಲ್ಲ ಎಂದು ವಾಪಸ್ಸು ಕಳುಹಿಸಿದರು. ಪರಮಾತ್ಮ ಎಲ್ಲೆಡೆಯೂ ಎಲ್ಲರ ಆತ್ಮದಲ್ಲಿಯೂ ಇದ್ದಾನೆ. ಎಲ್ಲವನ್ನೂ ನೋಡುತ್ತಿದ್ದಾನೆ ಎಂದು ತಿಳಿಯಬೇಕು ಆಗ ನಾವು ಯಾವ ಪಾಪವನ್ನಾಗಲಿ ಮಾಡಲಾರೆವು
ನೀತಿ: ದೇವರಿಲ್ಲದ ಜಾಗವೇ ಇಲ್ಲ.




