ಬುದ್ಧ ತಿಳಿಸಿದ ಕರ್ಮದ ನಿಯಮ

ಒಂದು ದಿನ ಬುದ್ಧನ ಬಳಿ ಯುವಕನೊಬ್ಬ ಬಂದ. ಆ ಯುವಕ ಬೇಸರದಲ್ಲಿದ್ದ. ಇದನ್ನು ಕಂಡ ಬುದ್ಧ ಏಕೆ ಇಷ್ಟೊಂದು ಚಿಂತೆಯಲ್ಲಿರುವೆ ? ಎಂದು ಕೇಳಿದರು. ಆಗ ಯುವಕ ನಮ್ಮ ತಂದೆಯವರು ನಿಧನರಾಗಿದ್ದಾರೆ. ಅವರ ಅಗಲಿಕೆಯನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಈಗ ತಂದೆಯವರ ಆತ್ಮ ಸ್ವರ್ಗಕ್ಕೆ ಹೋಗಲು ಅದಕ್ಕೆ ಪೂರಕವಾದ ಧಾರ್ಮಿಕ ವಿಧಿ-ವಿಧಾನಗಳನ್ನು ಮಾಡಬೇಕಿದೆ.
ನಿಮ್ಮ ಕೈಯಿಂದ ಅದನ್ನು ಮಾಡಿಸಿ ಆ ಮೂಲಕ ನೀವು ಅವರ ಆತ್ಮವನ್ನು ಸ್ವರ್ಗಕ್ಕೆ ಕಳುಹಿಸಬೇಕು ಎಂದು ಬೇಡಿಕೊಂಡ.
ಆಗ ಬುದ್ಧ ಸರಿ ಹಾಗದರೆ ಎರಡು ಮಡಿಕೆಗಳು, ಬೆಣ್ಣೆ ಮತ್ತು ಬೆಣಚು ಕಲ್ಲುಗಳನ್ನು ತೆಗೆದುಕೊಂಡು ಬಾ ಎಂದು ಹೇಳಿದರು. ಯುವಕ ಅವುಗಳನ್ನೆಲ್ಲಾ ತೆಗೆದುಕೊಂಡು ಬಂದ. ಬುದ್ಧ ಒಂದು ಮಡಿಕೆಯಲ್ಲಿ ಬೆಣ್ಣೆ ಮತ್ತೊಂದು ಮಡಿಕೆಯಲ್ಲಿ ಬೆಣಚು ಕಲ್ಲುಗಳನ್ನು ತುಂಬಿ ಹತ್ತಿರದ ಕೊಳವೊಂದರಲ್ಲಿ ಮುಳುಗಿಸಲು ಹೇಳಿದರು.
ನಂತರ ಅದಕ್ಕೆ ಕೋಲಿನಿಂದ ಹೊಡಿ ಎಂದಾಗ ಯುವಕ ಅದನ್ನು ಹಾಗೆ ಮಾಡಿದ. ಆಗ ಮಡಿಕೆಯಲ್ಲಿ ಇದ್ದ ಬೆಣ್ಣೆ ನೀರಿನ ಮೇಲ್ಪದರದಲ್ಲಿ ತೇಲಲಾರಂಭಿಸಿತು. ಬೆಣಚು ಕಲ್ಲುಗಳು ಕೊಳದ ತಳ ಸೇರಿದವು. ಬುದ್ಧ ಹೇಳಿದರು; ಬೆಣಚು ಕಲ್ಲುಗಳು ನೀರಿಗಿಂತ ಭಾರವಾಗಿದ್ದರಿಂದ ಮುಳುಗಿದವು. ಬೆಣ್ಣೆ ನೀರಿಗಿಂತ ಹಗುರ. ಹೀಗಾಗಿ ನೀರಿನ ಮೇಲೆ ತೇಲಲಾರಂಭಿಸಿತು.
ಇದು ಪ್ರಕೃತಿಯ ನಿಯಮ. ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲ. ನಿನ್ನ ತಂದೆಯವರು ಜೀವನದಲ್ಲಿ ಹೇಗಿದ್ದರು ಎನ್ನುವುದು ಬಹಳ ಮುಖ್ಯವಾಗುತ್ತದೆ. ತಪ್ಪುಗಳನ್ನು ಮಾಡಿದ್ದರೆ ಅವರು ಆ ಬೆಣಚುಕಲ್ಲುಗಳಂತೆ ತಳ ಸೇರುತ್ತಾರೆ. ಎಲ್ಲರಿಗೂ ಒಳ್ಳೆಯದನ್ನೇ ಮಾಡಿದ್ದರೆ ಅವರನ್ನು ಯಾರು ಕೆಳಗೆ ತಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು. ಬುದ್ಧನ ಮಾತುಗಳನ್ನು ಅರ್ಥಮಾಡಿಕೊಂಡ ಯುವಕ ತನ್ನ ಮನೆಯತ್ತ ನಡೆದ.




