ರಿಯಾಯ್ತಿಗಾಗಿ ಕೆಎಸ್ಆರ್ಟಿಸಿ ಬಸ್ ಡಿಪೋ ಮೆನೇಜರ್ಗೆ ನಿಗಮದ ಹೋಟೆಲ್ ಮತ್ತು ಮಳಿಗೆ ಮಾಲಕರ ಸಂಘ ಮನವಿ

ಕಾರವಾರ : ಭಟ್ಕಳ ತಾಲೂಕಿನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಂಗಡಿ ಮಳಿಗೆಗಳ ಬಾಡಿಗೆಯನ್ನು ಕೋವಿಡ್ 19 ಒಂದನೇ ಅಲೆಯಲ್ಲಿ ನೀಡಿದಂತೆ ಎರಡನೇ ಅಲೆಯಲ್ಲಿಯೂ ರಿಯಾಯಿತಿ ನೀಡಬೇಕೆಂದು ತಾಲೂಕಿನ ಡಿಪೋ ಮ್ಯಾನೇಜರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಮನವಿಯಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗದ ಒಂದನೇ ಮತ್ತು ಎರಡನೇ ಅಲೆಯಿಂದ ಸರಕಾರವು ಶಾಲೆ,ಕಾಲೇಜುಗಳನ್ನು ಮುಚ್ಚಿರುವುದು ಹಾಗೂ ಮದುವೆ,ಮುಂಜಿ ಎಲ್ಲಾ ತರದ ಮನರಂಜನಾ ಕಾರ್ಯಕ್ರಮಗಳನ್ನು ರದ್ದು ಗೊಳಿಸಿರುವುದರಿಂದ ಮತ್ತು ಮೂರನೇ ಅಲೆಯ ಮುನ್ನೆಚ್ಚರಿಕೆಯಿಂದ ಸಾರ್ವಜನಿಕರು ಭಯಭೀತರಾಗಿದ್ದು,ಬಸ್ ಪ್ರಯಾಣಿಕರ ಸಂಚಾರ ತೀವ್ರ ಕುಸಿದ ಕಾರಣ ಕೆ.ಎಸ್.ಆರ್. ಟಿ.ಸಿ.ಸಂಸ್ಥೆಯ ಶೇಕಡಾ 30 ರಷ್ಟು ಬಸ್ ಗಳು ಮಾತ್ರ ಸಂಚರಿಸುತ್ತಿವೆ.ಆದ್ದರಿಂದ ಹೋಟೆಲ್,ಮಳಿಗೆಗಳು ಹಾಗೂ ವಸತಿ ಗೃಹಗಳ ವ್ಯಾಪಾರ ತೀವ್ರ ಕುಸಿದು ಸಾಲ ಮತ್ತು ಬಡ್ಡಿ ನಮ್ಮ ಮೇಲೆ ಹೇರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತೇವೆ.
ನಮ್ಮಲ್ಲಿದ್ದ ತಿಂಡಿ,ಪದಾರ್ಥಗಳು,ತಂಪು ಪಾನೀಯಗಳು,ಸರಕು ಸರಂಜಾಮಗಳು ಲಾಕಡೌನ್ ಸಮಯದಲ್ಲಿ ಹಾಳಾಗಿದೆ. ಇಂತಹ ಕಷ್ಟದ ಸಮಯದಲ್ಲಿ ಸಂಸ್ಥೆಯು ಏಪ್ರಿಲ್ ಮತ್ತು ಜೂನ್ 2021 ರವರೆಗೆ ತಿಂಗಳಿಗೆ ಶೇಕಡಾ 50 ರಷ್ಟು ಜುಲೈ ತಿಂಗಳಿಂದ ಶೇಕಡಾ 100 ರಷ್ಟು ಬಾಡಿಗೆ ನಿಗದಿಪಡಿಸಿರುತ್ತೀರಿ.ಏಪ್ರಿಲ್ ತಿಂಗಳಲ್ಲಿ 6 ದಿನಗಳು ಮಾತ್ರ ಬಸ್ ಸಂಚರಿಸಿದ್ದು,ಜೂನ್ ತಿಂಗಳಲ್ಲಿ 25 ದಿನ ಲಾಕಡೌನ್ ಹಾಕಲಾಗಿತ್ತು.ಕೋವಿಡ್ 19 ಎರಡನೇ ಅಲೆಯಲ್ಲಿ ಸಾವು ನೋವುಗಳು ಜಾಸ್ತಿಯಾಗಿದ್ದು,ವ್ಯಾಪಾರವಿಲ್ಲದೆ ಕಂಗಾಲಾಗಿರುವುದರಿಂದ ಏಪ್ರಿಲ್ ಮತ್ತು ಜೂನ್ ತಿಂಗಳಿಗೆ ಬಾಡಿಗೆಯನ್ನು ಸಂಪೂರ್ಣ ರದ್ದುಗೊಳಿಸಬೇಕೆಂದು ಮತ್ತು ಜುಲೈ 2021 ರಿಂದ ಮುಂದಿನ 6 ತಿಂಗಳವರೆಗೆ ಬಾಡಿಗೆಯಲ್ಲಿ ರಿಯಾಯಿತಿ ನೀಡಬೇಕೆಂದು ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಸಂತ ಕುಲಾಲ್,ಮೋಹನ ನಾಯ್ಕ,ಶಂಕರ ನಾಯ್ಕ,ಗಣೇಶ ದೇವಾಡಿಗ,ಸುರೇಶ ಶೆಟ್ಟಿ,ಸುರೇಶ ಗೊಂಡ,ಟಿ.ಡಿ.ನಾಯ್ಕ,ಮುಂತಾದವರು ಉಪಸ್ಥಿತರಿದ್ದರು.




