ಘಟಪ್ರಭಾ ನದಿ ಪ್ರವಾಹ; ಆಲಗುಂಡಿ ಬಿ ಕೆ ಗ್ರಾಮದಲ್ಲಿ ಮನೆಯೊಳಗೆ ನೀರು ನುಗ್ಗಿ ಅವಾಂತರ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ನದಿಯಲ್ಲಿ ಪ್ರವಾಹ ಮತ್ತಷ್ಟು ಹೆಚ್ಚಳವಾಗಿದೆ. ಮುಧೋಳ ತಾಲೂಕಿನ ಆಲಗುಂಡಿ ಬಿ ಕೆ ಗ್ರಾಮದಲ್ಲಿ ನೀರು ನುಗ್ಗಿ ನೂರಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಸಂತ್ರಸ್ತರು ರಾತ್ರಿಯಿಡಿ ನಿದ್ದೆ ಮಾಡಿಲ್ಲ. ಯಾವಾಗ ಮನೆ ಕುಸಿದು ಬೀಳುತ್ತವೋ ಗೊತ್ತಿಲ್ಲ ನಮ್ಮೂರು ಸ್ಥಳಾಂತರಿಸಿ ಶಾಶ್ವತ ಪರಿಹಾರ ಕೊಡಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಬಾಗಲಕೋಟೆ ಮುಧೋಳ ತಾಲೂಕಿನ ಕೊನೆಯ ಗ್ರಾಮ ಆಲಗುಂಡಿ ಬಿ ಕೆ.ಗ್ರಾಮದಲ್ಲಿ 840ಮನೆಗಳಿದ್ದು, ಘಟಪ್ರಭಾ ನದಿ ಪ್ರವಾಹಕ್ಕೆ 100ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ನೀರು ಹೆಚ್ಚಳವಾಗುತ್ತಿದೆ.ಮನೆಯಲ್ಲಿ ನೀರು ಆವರಿಸಿದ್ದು ಸಂತ್ರಸ್ತರು ಮಕ್ಕಳು ಮರಿಗಳೊಂದಿಗೆ ಅದೇ ನೀರಿನಲ್ಲಿ ದಿನ ದೂಡುತ್ತಿದ್ದಾರೆ. ಪ್ರವಾಹದ ನೀರಲ್ಲಿ ಹಾವು ಚೇಳಿನ ಹರಿದುಬರುತ್ತಿವೆ. ಮಹಿಳೆಯರು ಹಾವು ಚೇಳು ಕಚ್ಚುವ ಭೀತಿಯಿದೆ.
ಸತತವಾಗಿ ಇದೀಗ 3ವರ್ಷಗಳಿಂದ ಆಲಗುಂಡಿ ಬಿ ಕೆ ಗ್ರಾಮ ಪ್ರವಾಹಕ್ಕೆ ತುತ್ತಾಗುತ್ತಿದ್ದು, ಜೊತೆಗೆ ಆಲಮಟ್ಟಿ ಅಣೆಕಟ್ಟೆ ಜಲಾಶಯದ ಹಿನ್ನೀರು ಪ್ರದೇಶದಿಂದ ಆಲಗುಡಿ ಬಿ ಕೆ ಗ್ರಾಮವನ್ನು ಮಲೇರಿಯಾ ಗ್ರಾಮ ಎಂದು ಘೋಷಣೆ ಮಾಡಿದ್ದಾರೆ. ಆಲಮಟ್ಟಿ ಜಲಾಶಯ 524.24 ಮೀಟರ್ ಗೆ ಎತ್ತರಿಸಿದರೆ ಆಲಗುಂಡಿ ಬಿ ಕೆ ಮುಳುಗಡೆ ಗ್ರಾಮವಾಗುತ್ತಿದ್ದು. ಮುಧೋಳ ಕ್ಷೇತ್ರದ ಶಾಸಕ ಗೋವಿಂದ ಕಾರಜೋಳ ಯುಕೆಪಿ ಮಾದರಿಯಲ್ಲಿ ಗ್ರಾಮ ಸ್ಥಳಾಂತರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಸ್ಥಳಾಂತರ ಕಾರ್ಯವನ್ನು ವಿಳಂಬ ಮಾಡುತ್ತಿದ್ದು. ಇದರಿಂದ ಪ್ರತಿ ವರ್ಷ ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ಜನಜೀವನ ಪರದಾಡುವಂತಾಗಿದೆ. ಗ್ರಾಮದ ಮಹಿಳೆಯರು, ಹಿರಿಯರು ಆಲಗುಂಡಿ ಗ್ರಾಮವನ್ನು ಸ್ಥಳಾಂತರಿಸಿ, ಪ್ರವಾಹದಿಂದ ಮುಕ್ತಿ ಕೊಡಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ಮೇಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಆಲಗುಂಡಿ ಗ್ರಾಮ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕಿದೆ.




