Breaking Newsಜಿಲ್ಲಾ ಸುದ್ದಿರಾಮನಗರ

ಮೇಕೆದಾಟು ಯೋಜನೆ ಗೊತ್ತು ಪಡಿಸದಿದ್ದರೆ ಉಗ್ರ ಹೋರಾಟ: ವಾಟಾಳ್ ನಾಗರಾಜ್

ರಾಮನಗರ: ಮುಂದಿನ 15 ದಿನಗಳಲ್ಲಿ ಮೇಕೆದಾಟು ಯೋಜನೆಯ ಆರಂಭದ ದಿನಾಂಕವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪಷ್ಟಪಡಿಸದಿದ್ದರೆ ಉಗ್ರ ಹೋರಾಟ ಆರಂಭಿಸುವುದಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.

ನಗರದ ಐಜೂರು ವೃತ್ತದಲ್ಲಿ ಮೇಕೆದಾಟು ಯೋಜನೆಗಾಗಿ ಒತ್ತಾಯಿಸಿ, ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಶಾಸನ ಸಭೆಯನ್ನು 15ದಿನಗಳಲ್ಲಿ ಆಯೋಜಿಸುವುದಾಗಿ ಮಾಹಿತಿ ಇದೆ. ಶಾಸನ ಸಭೆಗೂ ಮುನ್ನ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುವ ದಿನಾಂಕವನ್ನು ಮುಖ್ಯ ಮಂತ್ರಿಗಳು ಪ್ರಕಟಿಸಬೇಕು ಎಂದು ವಾಟಾಳ್ ಒತ್ತಾಯಿಸಿದರು.

2020ನೇ ಸಾಲಿನಲ್ಲಿ ಯೋಜನಾ ವರದಿಯನ್ನು ಆನ್‌ಲೈನ್ ಮೂಲಕ ಕೇಂದ್ರಕ್ಕೆ ಸಲ್ಲಿಸಿದ್ದಾರೆ. ಆದರೆ ಇವತ್ತಿನವರೆಗೂ ಸರ್ಕಾರ ಯೋಜನೆಯ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ರಾಜ್ಯದ ಯಾವ ಸಚಿವರು, ಸಂಸದರಿಗು ಈ ವಿಚಾರದಲ್ಲಿ ಕಾಳಜಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಇತ್ತೀಚೆಗೆ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ್ದರು. ಆಗ ಅವರು ಮೇಕೆದಾಟು ಯೋಜನೆಯ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಪ್ರಧಾನಿಗಳಿಂದ ಸ್ಪಷ್ಟ ಭರವಸೆಯನ್ನು ಪಡೆಯಲಿಲ್ಲ. ಆದರೂ ಮುಖ್ಯಮಂತ್ರಿಗಳು ಮೇಕೆದಾಟು ಯೋಜನೆ ಆರಂಭಿಸುವುದಾಗಿ ಜನರಿಗೆ ಸುಳ್ಳು ಹೇಳಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಸರಕಾರ ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ. ಅವರು ತಮ್ಮ ಅಕಾರಕ್ಕಿಂತ ಮೇಕೆದಾಟು ಯೋಜನೆ ಮುಖ್ಯ ಎಂಬುದನ್ನು ಅರಿಯಬೇಕು. ಮೋದಿ ನೇತೃತ್ವದ ಕೇಂದ್ರ ಸರ್ಕಾರದಂತಹ ಕೆಟ್ಟ ಸರ್ಕಾರವನ್ನು ತಾವೆಂದು ಕಂಡಿಲ್ಲ, ಒಂದೆಡೆ ರಾಜ್ಯಕ್ಕೂ ಭರವಸೆ ಕೊಡುತ್ತಿದ್ದಾರೆ, ಇನ್ನೊಂದೆಡೆ ತಮಿಳುನಾಡಿಗೂ ಭರವಸೆ ಕೊಡುತ್ತಿದ್ದಾರೆ ಎಂದು ಜರಿದರು.

Spread the love

Related Articles

Leave a Reply

Your email address will not be published. Required fields are marked *

Back to top button