Breaking Newsಉತ್ತರ ಕನ್ನಡಜಿಲ್ಲಾ ಸುದ್ದಿ

ಸುನೀಲ್ ನಾಯ್ಕ ಎರಡು ನಾಲಿಗೆ ಹೊಂದಿರುವ ಶಾಸಕ; ಮಂಕಾಳ ವೈದ್ಯ ಗಂಭೀರ ಆರೋಪ

ಕಾರವಾರ : ಭಟ್ಕಳ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಎರಡು ನಾಲಿಗೆ ಹೊಂದಿರುವ ವ್ಯಕ್ತಿ. ರಾಜ್ಯದಲ್ಲೆ ಸುಳ್ಳಿನ ಸರದಾರ ಈ ಶಾಸಕ ಎಂದು ಭಟ್ಕಳ ಕ್ಷೇತ್ರದ ಮಾಜಿ ಶಾಸಕ ಮಂಕಾಳ ವೈದ್ಯ ಗಂಭೀರ ಆರೋಪ ಮಾಡಿದರು.

ಹೊನ್ನಾವರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಸರಕೋಡ ಬಂದರು ಕಾಮಗಾರಿ ವಿಷಯದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಮನೆ ಹಾಗೂ ಮೀನುಗಾರರಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ಮಳೆಗಾಲದ ಕೊರೊನಾ ವೀಕೆಂಡ್‌ ಕರ್ಪ್ಯೂ ನಡುವೆ 500 ಕ್ಕೂ ಹೆಚ್ಚಿನ ಪೊಲೀಸರನ್ನು ಇಟ್ಟು ರಸ್ತೆ ಮಾಡಲು ಮುಂದಾಗುತ್ತಿದ್ದಾರೆ.

ಕಾಸರಕೋಡ ವಾಣಿಜ್ಯ ಬಂದರು ಅಭಿವೃದ್ಧಿಗೆ 2010 ರಲ್ಲಿಯೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೃಷ್ಣ ಪಾಲೇಮಾರ್‌ ಅವರು ಬಂದರು ಇಲಾಖೆ ಸಚಿವರಿದ್ದಾಗ
10 ಎಕರೆ ಜಾಗ ಮಾತ್ರ ಮಂಜೂರಿಯಾಗಿತ್ತು.ಆ ಸಂದರ್ಭದಲ್ಲಿ ಮೀನುಗಾರ ಮನೆಗಳಿಗೆ ಮತ್ತು ಅವರ ಬದುಕಿಗೆ ಯಾವುದೇ ತೊಂದರೆಯಾಗದಂತೆ ಬಂದರು
ಅಭಿವೃದ್ಧಿ ಮಾಡುವ ಷರತ್ತಿನ ಅನ್ವಯ 2017 ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮಗಾರಿಯನ್ನು ಉದ್ಘಾಟನೆ ಮಾಡಿದ್ದಾರೆ. ಆದರೆ ನಂತರ ಈ ಕಂಪನಿಗೆ ಹೆಚ್ಚಿನ ಭೂಮಿಯನ್ನು ಮತ್ತು ಹೆಚ್ಚಿನ ಅನುದಾನವನ್ನು ನೀಡಿ ಕಾಸರಕೋಡ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂದು ವೈದ್ಯ ಅವರು ಆರೋಪಿಸಿದರು.

ಒಕ್ಕಲೆಬ್ಬಿಸುವ ಮಾತನಾಡುತ್ತಿರುವ ಶಾಸಕರಿಗೆ ಮಾನವೀಯತೆಯಿಲ್ಲ. ನಾನು ಶಾಸಕನಾಗಿದ್ದಾಗ ಕ್ಷೇತ್ರಕ್ಕೆ 1700 ಕೋಟಿ ರೂ. ಅನುದಾನ ತಂದಿರುವುದನ್ನು
ಒಪ್ಪಿಕೊಂಡಿರುವ ಸುನೀಲ್‌ ನಾಯ್ಕ ತಾನು 300 ಕೋಟಿ ರೂ.ಅನುದಾನ ತಂದಿದ್ದೇನೆ, ಸೇತುವೆ ತಂದಿದ್ದೇನೆ ಎಂದೆಲ್ಲ ಹೇಳುತ್ತಾರೆ. ಎಲ್ಲಿದೆ ಅವರು ತಂದಿರುವ ಕಾಮಗಾರಿ ತೋರಿಸಲಿ ಎಂದು ಅವರು ಸವಾಲೆಸೆದರು. ಸುಳ್ಳು ಹೇಳುವುದನ್ನು ಮತ್ತು ಪತ್ರಿಕೆಗಳಿಗೆ ಸುಳ್ಳು ಮಾಹಿತಿ ಕೊಡುವುದನ್ನು ಅವರು ನಿಲ್ಲಿಸಬೇಕು. ನನ್ನ ಅವಧಿಯಲ್ಲಿ ಸಾವಿರಾರು ಮನೆಗಳನ್ನು ಕೊಡಿಸಿದ್ದೇನೆ. ನೂರಾರು ಜನರಿಗೆ ಹಕ್ಕು ಪತ್ರವನ್ನು ಕೊಡಿಸಿದ್ದೇನೆ. ಇವರಿಗೆ ಒಂದು ಹಕ್ಕುಪತ್ರ ಕೊಡಿಸುವ ಯೋಗ್ಯತೆಯಿಲ್ಲ ಎಂದು ಮಂಕಾಳ ವೈದ್ಯ ಟೀಕಿಸಿದರು.

ನಾವೆಲ್ಲ ಕಾಸರಕೋಡ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ.ಅವರ ರಕ್ಷಣೆಗೆ ನಿಲ್ಲುತ್ತೇವೆ ಎಂದು ಮಂಕಾಳ ವೈದ್ಯ ಹೇಳಿದರು.ಮಂಕಿ ಅನಂತವಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ವೆ ನಂಬರ್‌ 315 ಮತ್ತು 316 ಪ್ರದೇಶದ ಜಾಗವನ್ನು ಕಂಪನಿಗೆ ಮೀಸಲಿಟ್ಟವರು ಯಾರು ಎಂದು ಅವರು ಪ್ರಶ್ನಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button