Latestಅಂಕಣಗಳುರಾಜಕೀಯರಾಷ್ಟ್ರೀಯ

ಯುಪಿ ರಾಜಕೀಯ | ಕುಸಿಯುತ್ತಿರುವ ಇಮೇಜ್ ಬದಲಾವಣೆಗೆ ಆರ್​ಎಸ್​ಎಸ್, ಬಿಜೆಪಿ ಹರಸಾಹಸ

ಜಿ.ಮುಮ್ತಾಜ್ ಅಲೀಮ್

ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರು ತಮ್ಮ ಮತಗಳು ಚದುರದಂತೆ ನೋಡಿಕೊಂಡರು. ಬಲಾಢ್ಯವಾದ ನಿರ್ದಿಷ್ಠ ಪಕ್ಷಕ್ಕೆ ಮಾತ್ರ ಮತ ಚಲಾಯಿಸುವ ಒಗ್ಗಟ್ಟು ಪ್ರದರ್ಶಿಸಿದರು. ಪರಿಣಾಮವಾಗಿ ಮಮತಾ ಬ್ಯಾನರ್ಜಿ ಅಭೂತಪೂರ್ವ ಯಶಸ್ಸು ಕಂಡರು. ಇದರಿಂದ ಎಚ್ಚೆತ್ತಿರುವ ಸಂಘದ ಪ್ರಮುಖರು 2024ರ ಲೋಕಸಭೆ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಸಂಘದ ನಿಲುವು ಮತ್ತು ಸಿದ್ದಾಂತದಲ್ಲಿ ಒಂದಷ್ಟು ರಾಜಿ ಪ್ರಯತ್ನಗಳಿಗೆ ಮುಂದಾಗಿದ್ದಾರೆ.

ಈ ಬಾರಿಯೂ ಶತಾಯ ಗತಾಯ ಉತ್ತರಪ್ರದೇಶವನ್ನು ಗೆಲ್ಲಲೇಬೇಕೆಂದು ಬಿಜೆಪಿ ಪಣ ತೊಟ್ಟಿದೆ. ಇದಕ್ಕೆ ಒತ್ತಾಸೆಯಾಗಿ ನಿಂತಿರುವುದು ಪಕ್ಷದ ಮಾತೃಸಂಸ್ಥೆ ಆರ್ ಎಸ್ ಎಸ್. ಚಿತ್ರಕೂಟದಲ್ಲಿ ಮೊನ್ನೆ ನಡೆದ ಸಂಘದ ಪೂರ್ಣಾವಧಿ ಕಾರ್ಯಕರ್ತರ ( ಪ್ರಚಾರಕ್) ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಸಂಘದ ಪ್ರಮುಖರು ಭಾಗವಹಿಸಿದ್ದ ಐದು ದಿನಗಳ ಈ ಸಭೆಯಲ್ಲಿ ಪ್ರಮುಖವಾಗಿ ಸನಿಹದಲ್ಲೆ ಇರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಂಘದ ಪಾತ್ರ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕೊರೋನಾ ಮೂರನೇ ಅಲೆ , ಸಂಘದ ಸಂಘಟನೆ ಮತ್ತಿತರ ವಿಚಾರಗಳು ಪ್ರಮುಖವಾಗಿ ಚರ್ಚೆಯಾಗಿವೆ.

‘ದೇಶದ ಹಿಂದೂ ಮುಸ್ಲಿಮರ ಡಿಎನ್ಎ ಒಂದೇ. ಹಿಂದೂಗಳನ್ನು ಮುಸ್ಲಿಮರಿಂದ ಪ್ರತ್ಯೇಕಿಸಿ ನೋಡುವುದು ತಪ್ಪು, ಮುಸ್ಲಿಮರ ವಿರುದ್ಧ ಮಾಬ್ ಲಿಂಚಿಂಗ್ (ಗುಂಪು ಹಲ್ಲೆ ) ಮಾಡುವವರು ಹಿಂದೂತ್ವದ ವಿರೋಧಿಗಳು’ ಎಂದು ಆರ್ ಎಸ್ ಎಸ್ ಸರಸಂಘ ಸಂಚಾಲಕ ಮೋಹನ್ ಭಾಗವತ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಭಾಗವತ್ ಅವರ ಈ ಹೇಳಿಕೆ ಅನೇಕರ ಹುಬ್ಬೇರುವಂತೆ ಮಾಡಿತು. ಹಿಂದೂರಾಷ್ಟ್ರ ಸಾಕಾರ ಪರಿಕಲ್ಪನೆಯ ಸಂಘದ ಬದಲಾದ ನಿಲುವನ್ನು ಅನೇಕರು ಅನುಮಾನದಿಂದ ನೋಡಿದರು.

ಹಾಗಾದರೆ ಮುಸ್ಲಿಮರ ಬಗ್ಗೆ ಮೃದು ಧೋರಣೆ ಅನುಸರಿಸುವ ಸಂಘದ ಬದಲಾದ ನಿಲುವಿಗೆ ಇದ್ದಕ್ಕಿದ್ದಂತೆ ನಡೆದ ಚಮತ್ಕಾರವಾದರೂ ಏನು? ಇದಕ್ಕೆ ಉತ್ತರ ಸುಲಭ. ಮುಂಬರುವ ಉತ್ತರ ಪ್ರದೇಶದ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಯ ದೂರದೃಷ್ಟಿ. ಉತ್ತರಪ್ರದೇಶ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ಮರು ಆಯ್ಕೆಗೆ ಅಗತ್ಯ ಭೂಮಿಕೆ ರೂಪಿಸುವುದು ಆ ಮೂಲಕ ಯೋಗಿ ಸರ್ಕಾರಕ್ಕೆ ಸಾಧ್ಯವಾದಷ್ಟು ಅನುಕೂಲ ಕಲ್ಪಿಸುವುದು ಸದ್ಯಕ್ಕೆ ಸಂಘದ ಮುಖ್ಯ ಉದ್ದೇಶ ಹಾಗೂ ಅಜೆಂಡಾ.

ಹಾಗೆ ನೋಡಿದರೆ ಉತ್ತರಪ್ರದೇಶದಲ್ಲಿ ಯೋಗಿ ಸರ್ಕಾರದ ಚರಿಷ್ಮಾ ಈಗ ಮೊದಲಿನಂತಿಲ್ಲ. ದಿನದಿಂದ ದಿನಕ್ಕೆ ಅದರ ಜನಪ್ರಿಯತೆ ಕುಸಿಯುತ್ತಾ ಬಂದಿದೆ. ಇದಕ್ಕೆ ಈಚೆಗೆ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯ ಫಲಿತಾಂಶವೇ ಸ್ಪಷ್ಟ ಉದಾಹರಣೆ. ಈ ಚುನಾವಣೆಯಲ್ಲಿ ಬಿಜೆಪಿ ಶತ ಪ್ರಯತ್ನಪಟ್ಟರೂ ಹೇಳಿಕೊಳ್ಳುವಂತಹ ಸ್ಥಾನಗಳು ದೊರಕಿಲ್ಲ. ಹೆಚ್ಚು ಕಡಿಮೆ ಧೂಳಿಪಟ ಆಗಿದೆ ಎಂದೇ ಹೇಳಬಹುದು. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಆಡಳಿತ ವೈಫಲ್ಯ, ವ್ಯಾಪಕ ಭ್ರಷ್ಟಾಚಾರ, ಹಳ್ಳ ಹಿಡಿದ ಕಾನೂನು ಮತ್ತು ಸುವ್ಯವಸ್ಥೆ, ಹೆಚ್ಚಿದ ದೌರ್ಜನ್ಯ ಪ್ರಕರಣಗಳು, ಯೋಗಿ ಸರ್ಕಾರ ಪರಿಪಾಲಿಸಿದ ವಿವಾದಾತ್ಮಕ ನೀತಿ ಮತ್ತು ಕಾಯಿದೆ ಕಟ್ಟಳೆಗಳು, ಕೊರೋನಾ ಸಾಂಕ್ರಮಿಕದ ಪರಿಣಾಮಕಾರಿ ನಿರ್ವಹಣೆಯಲ್ಲಿ ಸೋಲುಂಡ ಸರ್ಕಾರ, ಪವಿತ್ರ ಗಂಗಾ ನದಿಯಲ್ಲಿ ತೇಲಿದ ಹೆಣಗಳು ಇತ್ಯಾದಿ.

ಉತ್ತರ ಪ್ರದೇಶದಲ್ಲಿ ಇಂತಹ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಸಂಭವನೀಯ ಆಡಳಿತ ಧ್ರುವೀಕರಣ ಸಾಧ್ಯತೆಯನ್ನು ಹೇಗಾದರೂ ಮಾಡಿ ತಡೆಯಬೇಕು. ಮುಂದಿನ ಅವಧಿಗೂ ಯೋಗಿ ಸರ್ಕಾರವನ್ನೇ ಮತ್ತೆ ಅಧಿಕಾರದಲ್ಲಿ ಪ್ರತಿಷ್ಠಾಪಿಸಬೇಕು. ಇದು ಸಂಘದ ಈಗಿನ ಮುಖ್ಯ ಚಿಂತನೆ. ಹಾಗಿದ್ದರೆ ಇದಕ್ಕೆ ಅನುಸರಿಸಬೇಕಾದ ರಣನೀತಿ ಏನಾಗಿರಬೇಕು?

ಈವರೆಗೆ ಕಾಂಗ್ರೆಸ್ ಪಕ್ಷವನ್ನು ಗುರಿ ಮಾಡಿ ತಾನು ಟೀಕಿಸುತ್ತಾ ಬಂದ ಮುಸ್ಲಿಂ ತುಷ್ಟೀಕರಣ ನೀತಿಯನ್ನು ಪ್ರತ್ಯೇಕ್ಷವಾಗಿಲ್ಲದಿದ್ದರೂ ಪರೋಕ್ಷವಾಗಿ ಅನುಸರಿವುದು, ಸಂಘದ ಚಿಂತನೆಗಳಿಗೆ ಜಾತ್ಯಾತೀತೆಯ ರೂಪ ಕೊಡುವುದು. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು, ಯುಪಿಯಲ್ಲಿ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶಗಳಲ್ಲಿ ಸಂಘದ ಶಾಖೆಗಳನ್ನು ಹೆಚ್ಚು ಹೆಚ್ಚಾಗಿ ತೆರೆಯುವುದು ಇತ್ಯಾದಿ. ಇದಕ್ಕೆ ಇಂಬು ಎಂಬಂತೆ ಉತ್ತರ ಪ್ರದೇಶದಲ್ಲಿ ಆರ್ ಎಸ್ ಎಸ್ ಅಂಗ ಸಂಸ್ಥೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಕಾರ್ಯಚಟುವಟಿಕೆ ಹಾಗೂ ಕಾರ್ಯಕ್ರಮಗಳು ಹೆಚ್ಚುತ್ತಿರುವುದನ್ನು ಕಾಣಬಹುದು. ಜತೆಗೆ ಆರ್ ಎಸ್ ಎಸ್ ಸಖ್ಯ ಹೊಂದಿರುವ ಕೆಲವು ಮುಸ್ಲಿಂ ಮುಖಂಡರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸುವ ಮೂಲಕ ಒಂದಷ್ಟು ಸ್ಥಾನವಕಾಶ ಕಲ್ಪಿಸಲಾಗಿದೆ. ಸಂಘ ಅಥವಾ ಬಿಜೆಪಿ ಮುಸ್ಲಿಂ ವಿರೋಧಿ ಎಂಬ ಭಾವನೆ ಮಸಕಾಗಿಸುವ ಪ್ರಯತ್ನ ಇದರ ಹಿಂದಿದೆ ಎನ್ನುವುದು ಸುಳ್ಳೇನಲ್ಲ.

ದಿಕ್ಸೂಚಿಯಾದ ಪಶ್ಚಿಮಬಂಗಾಳ
ಈ ಬಾರಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರು ತಮ್ಮ ಮತಗಳು ಚದುರದಂತೆ ನೋಡಿಕೊಂಡರು. ಬಲಾಢ್ಯವಾದ ನಿರ್ದಿಷ್ಠ ಪಕ್ಷಕ್ಕೆ ಮಾತ್ರ ಮತ ಚಲಾಯಿಸುವ ಒಗ್ಗಟ್ಟು ಪ್ರದರ್ಶಿಸಿದರು. ಪರಿಣಾಮವಾಗಿ ಮಮತಾ ಬ್ಯಾನರ್ಜಿ ಅಭೂತಪೂರ್ವ ಯಶಸ್ಸು ಕಂಡರು. ಇದರಿಂದ ಎಚ್ಚೆತ್ತಿರುವ ಸಂಘದ ಪ್ರಮುಖರು 2024ರ ಲೋಕಸಭೆ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಸಂಘದ ನಿಲುವು ಮತ್ತು ಸಿದ್ದಾಂತದಲ್ಲಿ ಒಂದಷ್ಟು ರಾಜಿ ಪ್ರಯತ್ನಗಳಿಗೆ ಮುಂದಾಗಿದ್ದಾರೆ. ಇದರ ತಳಹದಿಯ ಮೇಲೆ ಹೊಸ ರಣನೀತಿ ರೂಪಿಸಿ, ಸುದೀರ್ಘ ಅವಧಿಯ ದೂರದೃಷ್ಟಿ ಮೆರೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಸೋಷಿಯಲ್ ಇಂಜಿನಿಯರಿಂಗ್
ಯುಪಿ ಚುನಾವಣೆಯಲ್ಲಿ ಸೋಷಿಯಲ್ ಇಂಜಿನಿಯರಿಂಗ್ ತಂತ್ರವನ್ನು ಅನುಸರಿಸಬೇಕಾದ್ದು ಅವಶ್ಯ ಮತ್ತು ಅನಿವಾರ್ಯ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ದಲಿತರು ಮತ್ತು ಹಿಂದುಳಿದ ವರ್ಗಗಳ ವ್ಯಾಪಕ ಬೆಂಬಲ ಸಿಕ್ಕಿತ್ತು. ಮುಂಬರುವ ಚುನಾವಣೆಯಲ್ಲೂ ಅದನ್ನು ಕಾಯ್ದುಕೊಳ್ಳುವ ಉದ್ದೇಶ ಸಂಘ ಮತ್ತು ಬಿಜೆಪಿಯದ್ದು. ಹೀಗಾಗಿಯೇ ಇತ್ತೀಚೆಗೆ ನಡೆದ ಮೋದಿ ಸರ್ಕಾರದ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ದಲಿತರು ಹಾಗೂ ಹಿಂದುಳಿದವರಿಗೆ ಹೆಚ್ಚಿನ ಸ್ಥಾನ ಕಲ್ಪಿಸುವ ಯತ್ನ ನಡೆದಿದೆ.

ಯುಪಿಗೆ ಸೀಮಿತವಾಗಿ ಹೇಳುವುದಾದರೆ, ಹಿಂದುಳಿದ ನಿಶಾದ್ ಜನಸಮುದಾಯದ ಪ್ರಮುಖ ನಾಯಕ ಕೇಶವ ಪ್ರಸಾದ್ ಮೌರ್ಯರಂತಹ ನಾಯಕರಿಗೆ ಮುಂಬರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಮಾತುಗಳು ಕೇಳಿಬರುತ್ತಿವೆ. ಪುರ್ವಿ ಸಮಾಜಕ್ಕೆ ಈಗಾಗಲೇ ಕೇಂದ್ರ ಮಂತ್ರಿಮಂಡಲದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಆದರೆ ಹಿಂದುಳಿದವರಲ್ಲಿ ಪ್ರಬಲ ಜಾಟ್ ಹಾಗೂ ಯಾದವ ಜನಸಮುದಾಯದ ವಿರಾಟ್ ರಾಜಕೀಯ ಶಕ್ತಿ ಎದುರು ದಲಿತ ಹಾಗೂ ಉಳಿದ ಹಿಂದುಳಿದ ಜಾತಿಗಳನ್ನು ಒಂದೇ ತಕ್ಕಡಿಯಲ್ಲಿ ಕೊಂಡೊಯ್ಯುವ ದೊಡ್ಡ ಸವಾಲಿನ ಕೆಲಸವನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಮಂದಿರ ನಿರ್ಣಾಣದಲ್ಲೂ ಭ್ರಷ್ಟಾಚಾರದ ಘಮಲು
ಇನ್ನು ಚಿತ್ರಕೂಟದಲ್ಲಿ ನಡೆದ ಸಂಘದ ಸಭೆಯಲ್ಲಿ ಚರ್ಚೆಯಾಗಿರುವ ರಾಮಮಂದಿರ ನಿರ್ಮಾಣ ವಿಷಯ ಬಿಜೆಪಿಗೆ ವರವಾಗಿಸುವಕೊಳ್ಳುವ ಪ್ರಯತ್ನ ನಡೆದಿದೆ. ಆದರೆ ರಾಮಜನ್ಮ ಭೂಮಿ ಟ್ರಸ್ಟ್ ನಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರ ವಿವಾದ ಅದಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.

ಗಂಗೆಯಲ್ಲಿ ತೇಲಿದ ಹೆಣಗಳು
ಉತ್ತರಪ್ರದೇಶದ ಯೋಗಿ ಸರ್ಕಾರ ಕೊರೋನಾ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಎಡವಿತು. ಪವಿತ್ರ ಗಂಗಾನದಿಯಲ್ಲಿ ಹೆಣಗಳು ತೇಲಿದವು. ಕೊರೋನಾದ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಸಂಘದ ಹೆಚ್ಚುಕಡಿಮೆ ಕಣ್ಮರೆಯಾಗಿದ್ದರು.

ಈಗ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಸಂಘದ ಲಕ್ಷಾಂತರ ಕಾರ್ಯಕರ್ತರನ್ನು ಸಕ್ರಿಯಗೊಳಿಸುವ ಪ್ರಯತ್ನಗಳು ನಡೆದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಮೂರನೇ ಅಲೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆದಿವೆ.

ಸಾಂಸ್ಕೃತಿಕ ಸಂಘಟನೆಯಾಗಿ ಉಳಿದಿದೆಯೇ ಆರ್​ಎಸ್​ಎಸ್?
ಇವುಗಳೆಲ್ಲದರ ನಡುವೆ ಸಾಂಸ್ಕೃತಿಕ ಸಂಘಟನೆ ಎಂದು ಕರೆಸಿಕೊಳ್ಳುತ್ತಿದ್ದ ಆರ್ ಎಸ್ ಎಸ್ ಈಗ ಷಡ್ಯಂತರಕಾರಿ ಸಂಸ್ಥೆ ಎಂಬ ಅನ್ವರ್ಥನಾಮಕ್ಕೂ ಈಡಾಗಿದೆ. ಮೊದಲೆಲ್ಲಾ ಸಂಘದ ಕಾರ್ಯಕರ್ತರು ಮಾತೃಭೂಮಿ, ರಾಷ್ಟ್ರಭಕ್ತಿ, ನಿಸ್ವಾರ್ಥ ಸೇವೆ ಎಂದೆಲ್ಲಾ ಹೇಳುತ್ತಿದ್ದರು. ರಾಮಮಂದಿರ ಮತ್ತಿತರ ವಿಷಯಗಳಿಗೆ ವಿನಮ್ರತೆಯಿಂದ ಚಂದಾ ಕೇಳುತ್ತಿದ್ದರು. ಯಾರನ್ನೂ ಟಾರ್ಗೆಟ್ ಮಾಡುತ್ತಿರಲಿಲ್ಲ.

ಆದರೆ ಬದಲಾದ ಸನ್ನಿವೇಶದಲ್ಲಿ ಈಗ ಅದರ ಒಲವು, ನಿಲುವುಗಳು ಬದಲಾಗಿವೆ. ಅಧಿಕಾರದಾಹ, ಷಡ್ಯಂತ್ರಕಾರಿ ರಾಜಕೀಯ, ವಿರೋಧಿಗಳನ್ನು ಟಾರ್ಗೆಟ್ ಮಾಡುವುದು ಮತ್ತಿತರ ಗಂಡಾಂತರಕಾರಿ ಚಿಂತನೆಗಳು ಮುನ್ನಲೆಗೆ ಬಂದಿವೆ. ಸಂಘದ ಇಮೇಜ್ ಜತೆಗೆ ಕೇಸರಿ ಪಕ್ಷದ ಇಮೇಜ್ ಕೂಡ ಬದಲಾಗಿದೆ ಎನ್ನಲಾಗುತ್ತಿದೆ.

ಇಂತಹ ಸನ್ನಿವೇಶದಲ್ಲಿ ಕುಸಿಯುತ್ತಿರುವ ಸಂಘ ಮತ್ತು ಪಕ್ಷದ ಇಮೇಜನ್ನು ವೃದ್ಧಿಸಿಕೊಂಡು ಅಧಿಕಾರದಲ್ಲಿ ಮುಂದುವರಿಯುವ ಹವಣಿಕೆ ಎದ್ದು ಕಾಣಲಾರಂಭಿಸಿದೆ. ಅದಕ್ಕಾಗಿ ಚುನಾವಣಾ ಸಂದರ್ಭದಲ್ಲಿ ಜನಮನ ಒಲಿಸಲು ನಾನಾ ತಂತ್ರ-ಮಂತ್ರಗಳನ್ನು ಅನುಸರಿಸಲಾಗುತ್ತಿದೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.

ಹೀಗಾಗಿ ಯುಪಿ ಒಂದರಲ್ಲೇ ಸುರೇಶ್ ಭಯ್ಯಾಜಿ ಜೋಷಿ ಸೇರಿದಂತೆ ಸಂಘದ ಅರ್ಧ ಡಜನ್ ಗೂ ಹೆಚ್ಚು ಪ್ರಮುಖರು ಅಖಾಡಕ್ಕೆ ಇಳಿದಿದ್ದಾರೆ. ಕೊರೋನಾ ಮೂರನೇ ಅಲೆ ಜಾಗೃತಿ ಹೆಸರಲ್ಲಿ ಸಂಘದ ಕಾರ್ಯಕರ್ತರನ್ನು ಮತ್ತೆ ಸಕ್ರಿಯಗೊಳಿಸಲಾಗುತ್ತಿದೆ. ಒಟ್ಟಾರೆ ಕುಸಿಯುತ್ತಿರುವ ಸಂಘ ಮತ್ತು ಪಕ್ಷದ ಇಮೇಜನ್ನು ವೃದ್ಧಿಸುವ ಪ್ರಯತ್ನಗಳು ನಡೆದಿವೆ ಎಂಬುದು ಸುಳ್ಳೇನಲ್ಲ.

ಇದನ್ನೂ ಓದಿ: ಯುಪಿ ಸರ್ಕಾರದ ಬಗ್ಗೆ ಮೋದಿ ಶ್ಲಾಘನೆ; ಯೋಗಿ ವಿರುದ್ಧ ಭಿನ್ನಮತವೆದ್ದ ಹೊತ್ತಿನಲ್ಲಿ ಅಚ್ಚರಿಯ ಬೆಳವಣಿಗೆ

Spread the love

Related Articles

Leave a Reply

Your email address will not be published. Required fields are marked *

Back to top button