ಅಪರಿಚಿತ ಶವವೆಂದು ಹೂಳಲಾಗಿತ್ತು: ವಾರಸುದಾರರು ಪತ್ತೆಯಾದ ಕಾರಣ ಮತ್ತೆ ಶವ ಹೊರಕ್ಕೆ

ಹುಬ್ಬಳ್ಳಿ: ಅಪರಿಚಿತ ಶವವೆಂದು ಸರ್ಕಾರದ ನಿರ್ದೇಶನದಂತೆ ಪೊಲೀಸ್ ಇಲಾಖೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಿದ ಶವವನ್ನು, ಕುಟುಂಬಸ್ಥರ ಮನವಿ ಮೇರೆಗೆ ಮೂರು ದಿನಗಳ ಬಳಿಕ ಹೊರ ತೆಗೆದು ಮೃತದೇಹವನ್ನು ಹಸ್ತಾಂತರ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಕಳೆದ ಏಪ್ರಿಲ್ 5 ರಂದು ನಗರದ ಉಣಕಲ್ ಕೆರೆಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಸಾರ್ವಜನಿಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ವಿದ್ಯಾನಗರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದರು. ನಂತರ ಮೃತನ ಸಂಬಂಧಿಗಳ ಪತ್ತೆಗಾಗಿ ಪ್ರಯತ್ನ ಮಾಡಲಾಗಿತ್ತು. ಆದರೆ ಶವದ ವಾರಸುದಾರರು ಪತ್ತೆಯಾಗದ ಕಾರಣ ಹಾಗೂ ಶವ ನೀರಿನಲ್ಲಿ ಕೊಳೆತ್ತಿದ್ದ ಕಾರಣದಿಂದಾಗಿ ಒಂದು ದಿನದ ಬಳಿಕ ಪೊಲೀಸ್ ಇಲಾಖೆಯ ಅಧಿಕಾರಿಗಳು ಪಾಲಿಕೆಯ ಪೌರ ಕಾರ್ಮಿಕರ ನೆರವಿನೊಂದಿಗೆ ಸರ್ಕಾರದ ನಿರ್ದೇಶನದಂತೆ ಶವವನ್ನು ಬಿಡನಾಳ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಿದ್ದರು.
ಉಣಕಲ್ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ವ್ಯಕ್ತಿಯು ಹುಬ್ಬಳ್ಳಿಯ ಪೆಂಡಾರ ಗಲ್ಲಿಯ ನಿವಾಸಿ ಅಬ್ದುಲ್ ಮುನಾಫ್ ಕಲಾದಗಿಯಾಗಿದ್ದು, ಈತ ಆತ್ಮಹತ್ಯೆ ಮಾಡಿಕೊಂಡಿದ್ದ ಉಣಕಲ್ ಕೆರೆಯ ಬಳಿ ಬೈಕ್ ಹಾಗೂ ಬಟ್ಟೆ ಪತ್ತೆಯಾಗಿತ್ತು. ಅವುಗಳನ್ನು ವಿದ್ಯಾನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಠಾಣೆಯಲ್ಲಿ ಇರಿಸಿಕೊಂಡಿದ್ದರು, ಇದರ ಮಾಹಿತಿ ಪಡೆದುಕೊಂಡಿದ್ದ ಮುನಾಫ್ ತಂದೆ ಮುಜಾಫರ್ ಅವರು ಬೈಕ್ ಹಾಗೂ ಬಟ್ಟೆಯನ್ನು ಗುರುತಿಸಿದ್ರು. ಬಳಿಕ ಮಗ ಮನೆ ಬಿಟ್ಟು ಹೋಗಿದ್ದ, ಅವನನ್ನು ಹುಡುಕಲಾಗುತಿತ್ತು. ಈಗ ಅವನು ಕೆರೆಗೆ ಬಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಮಗನ ಮೃತ ದೇಹವನ್ನು ನಮಗೆ ನೀಡಿ, ಇಸ್ಲಾಂ ಧರ್ಮದ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ ಮಾಡಬೇಕು ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ತಂದೆ ಮನವಿಯ ಮೇರೆಗೆ ಕಳೆದ ದಿನ ಶುಕ್ರವಾರದಂದು ಮೃತ ಅಬ್ದುಲ್ ಮುನಾಫ್ ಕಲಾದಗಿ ಶವವನ್ನು, ಹುಬ್ಬಳ್ಳಿ ಶಹರ ತಹಶೀಲ್ದಾರ್ ಶಶಿಧರ್ ಮಾಡ್ಯಾಳ, ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ, ಪೊಲೀಸ್ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಮೃತ ದೇಹವನ್ನು ಮೃತನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.
