ಮನೆಯಲ್ಲೇ ರೋಗಿ ಆರೋಗ್ಯದ ಮೇಲೆ ನಿಗಾ

ಬೆಂಗಳೂರು: ದೇಶದ ಎರಡನೇ ಅತೀ ದೊಡ್ಡ ಖಾಸಗಿ ಆಸ್ಪತ್ರೆ ಸರಣಿ ಹೊಂದಿರುವ ಮಣಿಪಾಲ್ ಆಸ್ಪತ್ರೆಯು ಶಸ್ತ್ರಚಿಕಿತ್ಸೆ ಬಳಿಕ ಮನೆಗೆ ಮರಳಿದ ರೋಗಿಯ ಆರೋಗ್ಯದ ಮೇಲೆ ಗಮನವಿಡುವ ಅತ್ಯಾಧುನಿಕ ಫಿಟ್ಬಿಟ್ ತಂತ್ರಜ್ಞಾನಕ್ಕಾಗಿ ಕನೆಕ್ಟೆಡ್ ಲೈಫ್ ಕಂಪನಿ ಜೊತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಒಪ್ಪಂದಕ್ಕೆ ಎರಡು ಸಂಸ್ಥೆಗಳ ಪ್ರತಿನಿಧಿಗಳು ಸಹಿ ಹಾಕಿದ್ದು ಸಂಕೀರ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಯಲ್ಲಿರುವವರ ಆರೋಗ್ಯದ ಮೇಲೆ ನಿಗಾ ವಹಿಸಲು ದೇಹಕ್ಕೆ ಬಟ್ಟೆ ಮಾದರಿಯಲ್ಲಿ ಧರಿಸಬಹುದಾದ ಸಾಧನಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಸಾಧನವು ಆರೋಗ್ಯವನ್ನು ಪಅರಿಶೀಲನೆ ಮಾಡುತ್ತಿರುರುತ್ತದೆ. ಅನಾರೋಗ್ಯ ಸಮಸ್ಯೆ ಉಂಟಾದರೆ ನೇರವಾಗಿ ಆಸ್ಪತ್ರೆಯಿಂದಲೇ ವೈದ್ಯರು ವರ್ಚುಯಲ್ ಮೂಲಕ ರೋಗಿಯ ಸ್ಥಿತಿಗತಿ ಅರಿತು ಚಿಕಿತ್ಸೆಗೆ ಮಾರ್ಗದರ್ಶನ ನೀಡಲು ನೆರವಾಗಲಿದೆ ಎಂದು ಹೇಳಲಾಗಿದೆ.ಈ ಬಗ್ಗೆ ಮಾತನಾಡಿದ ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ ಸುದರ್ಶನ್ ಬಲ್ಲಾಳ್, ಹೃದಯದ ಬಡಿತ, ಆಮ್ಲಜನಕ ಪ್ರಮಾಣ, ದೇಹದ ಚಟುವಟಿಕೆಯನ್ನು ಅಧ್ಯಯನ ಮಾಡಬಲ್ಲದು. ಈ ಮೂಲಕ ರೋಗಿಯೊಂದಿಗೆ ದಿನದ 24 ಗಂಟೆಯೂ ಸಂಪರ್ಕ ಸಾಧಿಸಬಹುದು ಎಂದರು.ಫಿಟ್ಬಿಟ್ ಇಂಡಿಯಾದ ರಾಷ್ಟ್ರೀಯ ವ್ಯವಸ್ಥಾಪಕ ಅಲೋಕ್ ಶಂಕರ್, ಕನೆಕ್ಟೆಡ್ ಲೈಫ್ ನ ಮುಖ್ಯಕಾರ್ಯ ನಿರ್ವಾಹಣಾ ಅಧಿಕಾರಿ ಡಾರಿಲ್ ಅರ್ನಾಲ್ಡ್ ಹಾಜರಿದ್ದರು.




