ಪುನೀತ್ ಗೆ ಶುಭ ಹಾರೈಸಿದ ಸ್ಯಾಂಡಲ್ ವುಡ್ ಕಲಾವಿದರು

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಇಂದು 47ನೇ ವರ್ಷದ ಹುಟ್ಟುಹಬ್ಬ. ಒಂದು ಕಡೆ ಅಭಿಮಾನಿಗಳು ಈ ದಿನವನ್ನ ಹಬ್ಬದ ರೀತಿಯಲ್ಲಿ ಸಂಭ್ರಮಿಸ್ತಿದ್ರೆ ಮತ್ತೊಂದು ಕಡೆ ಚಂದನವನದ ಬಹುತೇಕ ನಟರು ಪ್ರೀತಿಯ ಅಪ್ಪುಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿದ್ದಾರೆ.
ನಟ ಗೋಲ್ಡನ್ ಸ್ಟಾರ್ ಗಣೇಶ್, ನವರಸ ನಾಯಕ ಜಗ್ಗೇಶ್, ರಕ್ಷಿತ್ ಶೆಟ್ಟಿ, ರಮೇಶ್ ಅರವಿಂದ್, ದುನಿಯಾ ವಿಜಯ್ ಸೇರಿದಂತೆ ಸಾಕಷ್ಟು ನಟರು ಪುನೀತ್ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.
ನಟನೆಯ ಜೊತೆಗೆ ಸಾಮಾಜಮುಖಿ ಕೆಲಸಗಳಿಂದ ಕೋಟ್ಯಾಂತರ ಅಭಿಮಾನಿಗಳ ಪ್ರೀತಿ ಸಂಪಾದಿಸಿದ ಅಪ್ಪು ಅಗಲಿ ನಾಲ್ಕು ತಿಂಗಳು ಕಳೆದಿದೆ. ಆದರೆ ಅಭಿಮಾನಿಗಳ ಹೃದಯದಲ್ಲಿ ಅಪ್ಪು ಅಜರಾಮರವಾಗಿದ್ದಾರೆ ಅನ್ನೋದಕ್ಕೆ ಈ ದಿನವೇ ಸಾಕ್ಷಿ. ನಗರದ ಪ್ರತಿಯೊಂದು ಬೀದಿಗಳಲ್ಲೂ, ಹಳ್ಳಿ ಹಳ್ಳಿಗಳಲ್ಲೂ ಅಪ್ಪು ಹುಟ್ಟುಹಬ್ಬವನ್ನ ಹಬ್ಬದ ರೀತಿಯಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ.
ಅಪ್ಪು ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳೋ ಮೂಲಕ ಸಾಕಷ್ಟು ತಾರೆಯರು ಪುನೀತ್ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ನಟ ಗಣೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪುನೀತ್ ರ ವಿಶೇಷವಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ನಿಷ್ಕಲ್ಮಶ ನಗು, ಅಪರಿಮಿತ ವಿನಯವಂತಿಕೆ, ಸದಾ ಸ್ನೇಹಮಯಿ, ಕಲೆ ಇರುವವರೆಗೂ ನೀವು ಅಮರ ಅಪ್ಪು ಸರ್, ಹುಟ್ಟು ಹಬ್ಬದ ಸವಿ ನೆನಪುಗಳು ಎಂದು ಬರೆದುಕೊಂಡಿದ್ದಾರೆ.
ನಟ ದುನಿಯಾ ವಿಜಯ್ ಟ್ವೀಟ್ ಮಾಡಿ ನಿಮ್ಮ ಜನ್ಮ ವಾರ್ಷಿಕೋತ್ಸವದಂದು ನಿಮ್ಮ ಅಧ್ಬುತ ನಟನೆ ಹಾಗೂ ನೀವು ಮಾಡಿರುವ ಅನೇಕ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಸ್ಮರಿಸುತ್ತ, ನಿಮ್ಮ ಮರೆಯಲಾರದ ನೆನಪುಗಳನ್ನು ಮೆಲುಕು ಹಾಕುತ್ತಿದ್ದೇನೆ. ನಿಮ್ಮ ಅಗಲಿಕೆ ಕನ್ನಡ ಚಿತ್ರಂಗಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ತುಂಬಾ ನೋವುಂಟು ಮಾಡಿದೆ. ಜೇಮ್ಸ್ ಚಿತ್ರ ನಿಮ್ಮ ಕ್ರಿಯಾಶೀಲತೆ ಹಾಗೂ ನಿಮ್ಮ ಇಡೀ ಚಿತ್ರತಂಡ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿ. ನಮ್ಮೆಲ್ಲರ ಮನಸುಗಳಲ್ಲಿ ವಿಜಯಭೇರಿ ಬಾರಿಸಿ ನೂತನ ದಾಖಲೆ ಸೃಷ್ಟಿಸುವತ್ತ ಹೊರಟಿರುವ ಜೇಮ್ಸ್ ಚಿತ್ರವನ್ನು ಬರಮಾಡಿಕೊಳ್ಳಲು ಕಾಯುತ್ತಿರುವ ನಿಮ್ಮ ಕೋಟ್ಯಾಂತರ ಅಭಿಮಾನಿಗಳಲ್ಲಿ ನಾನು ಒಬ್ಬ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದು ಪುನೀತ್ ಅವರ ವ್ಯಕ್ತಿತ್ವವು ಅವರ ಹೆಸರನ್ನು ಪ್ರತಿಬಿಂಬಿಸುತ್ತದೆ. ಡಾ. ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು ನಮ್ಮ ಪ್ರೀತಿಯ ಅಪ್ಪು ಸರ್ ಅವರನ್ನು ಸ್ಮರಿಸುತ್ತಿದ್ದೇವೆ. ಅವರಂತೆಯೇ ಜೇಮ್ಸ್ ಸಿನಿಮಾ ಎಲ್ಲ ಪ್ರೀತಿಗಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಜೇಮ್ಸ್ ಚಿತ್ರತಂಡಕ್ಕೆ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.




