ಸಿದ್ದಾರೂಢರ ಗದ್ದುಗೆಗೆ ವಿಶೇಷ ಪೂಜೆ; ಮಠಕ್ಕೆ ಹರಿದು ಬಂದ ಭಕ್ತಸಾಗರ

ಹುಬ್ಬಳ್ಳಿ: ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿರಾತ್ರಿ ಹಬ್ಬದ ಕಳೆಯು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜೋರಾಗಿದೆ. ಮನೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಈಗ ಹುಬ್ಬಳ್ಳಿಗರು ತಮ್ಮ ಹತ್ತಿರದ ಶಿವನ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸುಪ್ರಸಿದ್ಧ ಶ್ರೀ ಸಿದ್ದಾರೂಢರ ಮಠಕ್ಕೂ ಕೂಡಾ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶಿವನಾಮ ಸ್ಮರಣೆಯೊಂದಿಗೆ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಉತ್ತರ ಕರ್ನಾಟಕ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರುವ ನಗರದ ಹಳೇ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಮಠಕ್ಕೆ ಜಿಲ್ಲೆಯ ಜನತೆ ಸೇರಿದಂತೆ ಹೊರ ಜಿಲ್ಲೆಯಿಂದಲ್ಲೂ ಶ್ರೀ ಸಿದ್ದಾರೂಢರ ಭಕ್ತರು ಮಠಕ್ಕೆ ಭೇಟಿ ನೀಡಿ, ಶ್ರೀ ಸಿದ್ದಾರೂಢ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಮೂಲಕ ಅರ್ಶೀವಾದ ಪಡೆದುಕೊಳ್ಳುತ್ತಿದ್ದಾರೆ.
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶ್ರೀ ಸಿದ್ದಾರೂಢ ಗದ್ದುಗೆ ಹಾಗೂ ಶ್ರೀ ಗುರುನಾಥರೂಢರ ಗದ್ದುಗೆಯ ಪ್ರವೇಶ ದ್ವಾರವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ವಿಶೇಷ ದೀಪಾಲಂಕಾರ ಜೊತೆಗೆ ಮುಭಾಗದಲ್ಲಿ ಪ್ಲಾಸ್ಟಿಕ್ ಹೂಗಳೊಂದಿಗೆ ಅಲಂಕಾರಿಸಲಾಗಿದೆ. ಇದು ಶ್ರೀ ಸಿದ್ದಾರೂಢ ಭಕ್ತರ ಗಮನ ಸೆಳೆಯುತ್ತಿದೆ.
ಮುಂಜಾನೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದು, ಯಾವುದೇ ರೀತಿ ನೂಕು ನುಗ್ಗಲು ಉಂಟಾಗಬಾರದ ಎಂಬ ಹಿನ್ನೆಲೆಯಲ್ಲಿ ಮಠದ ಆಡಳಿತ ಮಂಡಳಿಯ ಭದ್ರತಾ ಸಿಬ್ಬಂದಿಗಳು ಭಕ್ತರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ ಗದ್ದುಗೆ ದರ್ಶನಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.
ಮಠಕ್ಕೆ ಬೇಟಿ ನೀಡುತ್ತಿರುವ ಸಾವಿರಾರು ಸಂಖ್ಯೆಯ ಭಕ್ತರು, ಮೊದಲು ಶ್ರೀ ಸಿದ್ದಾರೂಢರ ಗದ್ದುಗೆ ಹಾಗೂ ಗುರುನಾಥರೂಢರ ಗದ್ದುಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಕೈಗೊಳ್ಳುತ್ತಾರೆ. ನಂತರ ನೇರವಾಗಿ ದೇವಸ್ಥಾನದಲ್ಲಿ ನೀಡಲಾದ ಪ್ರಸಾದ್‌ವನ್ನು ಸ್ವೀಕರಿಸಿದ ನಂತರ, ಶ್ರೀ ಗುರುನಾಥರೂಢರ ಗದ್ದುಗೆಯ ಪಕ್ಕದಲ್ಲಿರುವ ಕೈಲಾಸ ಮಂಟಪಕ್ಕೆ ಭೇಟಿ ನೀಡುತ್ತಾರೆ.
