Shivaratri 2022:ಶಿವರಾತ್ರಿ ಹಬ್ಬಕ್ಕೆ ಮೂವತ್ತು ಅಡಿಯ ಶಿವಲಿಂಗ ಅನಾವರಣ

ರಾಮನಗರ: ಜಿಲ್ಲೆಯಲ್ಲಿ ಮೂವತ್ತು ಅಡಿ ಶಿವಲಿಂಗವನ್ನು ಚನ್ನಪಟ್ಟಣ ತಾಲೂಕಿನ ಹನಿಯೂರು-ರಾಮೇಗೌಡನದೊಡ್ಡಿ ಗ್ರಾಮದ ನಡುವೆ ಪ್ರತಿಷ್ಠಾಪನೆ ಮಾಡಲಾಗಿದ್ದು, ಶಿವರಾತ್ರಿ ದಿನವಾದ ಮಂಗಳವಾರ ವಿದ್ಯುಕ್ತವಾಗಿ ಧಾರ್ಮಿಕ ವಿಧಾನದೊಂದಿಗೆ ಅನಾವರಣಗೊಳ್ಳಲಿದೆ.
ಜಿಲ್ಲೆಯಲ್ಲಿ ಇದು ಬೃಹತ್ ಲಿಂಗವೆಂದು ಹೆಸರು ಪಡೆಯಲಿದ್ದು, ಚನ್ನಪಟ್ಟಣ-ಸಾತನೂರು ಮುಖ್ಯ ರಸ್ತೆಯ ಬಳಿ ಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇದೇ ಮಾರ್ಗದಲ್ಲಿ ಮುಂದೆ ಹೋದರೇ ಧಾರ್ಮಿಕ ಕ್ಷೇತ್ರಗಳಾದ ಕಬ್ಬಾಳಮ್ಮ ದೇವಾಲಯ, ಮುತ್ತತ್ತಿ, ಭೀಮೇಶ್ವರಿ, ಪ್ರೇಕ್ಷಣಿಯ ಸ್ಥಳವಾದ ಸಂಗಮ ಮತ್ತು ಮೇಕೆದಾಟುವಿನಂತಹ ಸ್ಥಳಗಳಿದ್ದು, ಚನ್ನಪಟ್ಟಣ ಸಾತನೂರು, ಹಲಗೂರು ಮಾರ್ಗದಲ್ಲಿ ಹೋಗುವ ಭಕ್ತರು ಮತ್ತು ಪ್ರವಾಸಿಗಳನ್ನು ಆಕರ್ಷಿಸಲು ಬೃಹತ್ ಶಿವಲಿಂಗ ವಿಗ್ರಹವನ್ನು ಸ್ಥಾಪಿಸಲಾಗುತ್ತಿದೆ.
ಪುರಾಣ ಪ್ರಸಿದ್ದ ಸ್ಥಳವಾದ ಗವಿರಂಗಸ್ವಾಮಿ ಬೆಟ್ಟದ ತಪ್ಪಲಿಗೆ ಹತ್ತಿರವಿದ್ದು, ಚನ್ನಪ್ಪ ಸ್ವಾಮಿ ಮಠ ಕೂಡ ಈ ಭಾಗದಲ್ಲಿದೆ. ಹನಿಯೂರು ಮತ್ತು ರಾಮೇಗೌಡನದೊಡ್ಡಿ ಗ್ರಾಮದ ಮುಖ್ಯ ರಸ್ತೆಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಶ್ರೀ ಅಭಯ ಶನೈಶ್ಚರ ಸ್ವಾಮಿ ದೇವಾಲಯವಿದ್ಧು, ಇದಕ್ಕೆ ಸದ್ಯ ಇದಕ್ಕೆ ಶನಿಯೂರು ಎಂದು ಹೆಸರಿಸಲಾಗಿದೆ.
ಇದೇ ಸ್ಥಳದಲ್ಲಿ ಈಗ ಬೃಹತ್ ಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದ್ದ, , ಈ ಲಿಂಗಕ್ಕೆ ‘ಸಿದ್ದ ಬ್ರಹ್ಮ ಲಿಂಗೇಶ್ವರ’ ಎಂದು ಹೆಸರಿಡಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ದೇವರುಗಳ ವಿಗ್ರಹಗಳನ್ನು ವಿಶೇಷವಾದ ರೀತಿಯಲ್ಲಿ ಕೆತ್ತನೆ ಮಾಡಿ ಪ್ರತಿಷ್ಠಾಪಿಸಲು ಯೋಜಿಸಲಾಗುತ್ತಿದ್ದು, ಭಕ್ತಾಧಿಗಳ ನೆರವಿನಿಂದ ಅಭಯ ಶನೈಶ್ಚರ ಕ್ಷೇತ್ರವನ್ನು ಶ್ರೀಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ದೇವಸ್ಥಾನದ ಟ್ರಸ್ಟಿಗಳು ಮಾಹಿತಿ ನೀಡಿದ್ದಾರೆ.
