ಮುಂಬಯಿ: ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ವಿರುದ್ಧ ಸಮಾನಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನಗಳ ಭಾಗವಾಗಿ ಟಿಆರ್ ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್(ಕೆಸಿಆರ್) ಭಾನುವಾರ ಮಧ್ಯಾಹ್ನ ಮುಂಬಯಿನಲ್ಲಿ ಮಹಾರಾಷ್ಟ್ರ ಸಿಎಂ ಹಾಗೂ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಸಂಜೆ ನಂತರ ಎನ್ ಸಿಪಿ ನೇತಾರ ಶರದ್ ಪವಾರ್ ಅವರನ್ನೂ ಕೆಸಿಆರ್ ಭೇಟಿ ಸಮಾಲೋಚನೆ ನಡೆಸಿದರು.
ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಜತೆ ಚಂದ್ರಶೇಖರ್ ರಾವ್ ಕಳೆದ ವಾರ ದೂರವಾಣಿ ಕರೆ ಮಾಡಿದ್ದರು. ಈ ಸಂದರ್ಭದಲ್ಲಿ ರಾವ್ ಅವರನ್ನು ಠಾಕ್ರೆ, ಮುಂಬಯಿಗೆ ಬರುವಂತೆ ಆಹ್ವಾನಿಸಿದ್ದರು. ಉಭಯ ನಾಯಕರ ಭೇಟಿಯಿಂದ ಬಿಜೆಪಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ರಾಜಕೀಯ ಒಮ್ಮತದ ಮುಡಿಸುವ ಪ್ರಕ್ರಿಯೆ ಚುರುಕುಗೊಳ್ಳುವಂತಾಗಿದೆ.
ಶಿವಸೇನೆ ಜತೆ ಸಹಮತ: ಕೆಸಿಆರ್
ಠಾಕ್ರೆ ಜತೆಗಿನ ಭೇಟಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಸಿಆರ್, ನಾವು ಅಭಿವೃದ್ಧಿಯ ಸಮಸ್ಯೆಗಳನ್ನು ಸುಧಾರಿಸುವ ಮತ್ತು ತ್ವರಿತಗೊಳಿಸುವ ಮತ್ತು ದೇಶದಲ್ಲಿ ರಚನಾತ್ಮಕ ಮತ್ತು ನೀತಿ ಬದಲಾವಣೆಗಳನ್ನು ತರುವ ಬಗ್ಗೆ ವಿಸ್ತೃತ ಚರ್ಚೆ ಮಾಡಿದ್ದೇವೆ. ಎಲ್ಲಾ ವಿಷಯಗಳ ಬಗ್ಗೆ ಸಹಮತ ವ್ಯಕ್ತವಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ವಿರುದ್ಧ ಠಾಕ್ರೆ ಪರೋಕ್ಷ ಕಿಡಿ
ಮಹಾರಾಷ್ಟ್ರ ಸಿಎಂ ಹಾಗೂ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ನಮ್ಮ ಹಿಂದುತ್ವ ತಪ್ಪು ರಾಜಕೀಯ ಕಲಿಸುವುದಿಲ್ಲ. ದೇಶ ನರಕಕ್ಕೆ ಹೋದರೂ ಕೆಲವರು ತಮ್ಮ ಅಜೆಂಡಾಗಳಿಗಾಗಿ ಮಾತ್ರ ಕೆಲಸ ಮಾಡುತ್ತಾರೆ. ನಾವು ನಮ್ಮ ದೇಶವನ್ನು ಸರಿಯಾದ ದಾರಿಗೆ ತರಬೇಕಿದೆ. ಪ್ರಧಾನಿ ಯಾರು ಎಂಬುದನ್ನು ನಂತರ ಚರ್ಚಿಸಬಹುದು. ಇವತ್ತಿನಿಂದ ಹಲವು ರಾಜಕೀಯ ನಾಯಕರನ್ನು ನಾವು ಭೇಟಿ ಮಾಡುತ್ತೇವೆ ಎಂದರು.
ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ ನೊಂದಿಗೆ ಅಧಿಕಾರ ಹಂಚಿಕೊಂಡಿರುವ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನೂ ಕೆಸಿಆರ್ ಸಂಜೆ ನಂತರ ಭೇಟಿ ಮಾಡಿ ಚರ್ಚೆ ನಡೆಸಿದರು.
ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿಯ ಜನವಿರೋಧಿ ನೀತಿಗಳ ವಿರುದ್ಧ ಮತ್ತು ಒಕ್ಕೂಟದ ಮನೋಭಾವವನ್ನು ಎತ್ತಿಹಿಡಿಯುವ ರಾವ್ ಅವರ ಹೋರಾಟಕ್ಕೆ ಠಾಕ್ರೆ ಈ ಹಿಂದೆಯೂ ಸಂಪೂರ್ಣ ಬೆಂಬಲ ಘೋಷಿಸಿದ್ದರು.
ಹೆಚ್.ಡಿ.ದೇವೇಗೌಡ ಬೆಂಬಲ
ಹಲವು ವಿಷಯಗಳಲ್ಲಿ ಬಿಜೆಪಿ ಮತ್ತು ಕೇಂದ್ರವನ್ನು ಟೀಕಿಸಿರುವ ತೆಲಂಗಾಣ ಸಿಎಂ, ಬಿಜೆಪಿ ಮತ್ತು ಎನ್ ಡಿಎ ಸರ್ಕಾರದ ವಿರುದ್ಧ ವಿವಿಧ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಗಳ ಭಾಗವಾಗಿ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಸಹವರ್ತಿಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ್ದರು. ಈಗಾಗಲೇ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಮುಖ್ಯಸ್ಥ ಹೆಚ್.ಡಿ.ದೇವೇಗೌಡ ಅವರು ಕೆಸಿಆರ್ ಪ್ರಯತ್ನಗಳಿಗೆ ಬೆಂಬಲ ಘೋಷಿಸಿದ್ದಾರೆ.
ಕಳೆದ ವರ್ಷ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಉದ್ಧವ್ ಠಾಕ್ರೆ ಮತ್ತು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಇಬ್ಬರನ್ನು ಭೇಟಿಯಾಗಿದ್ದರು.
