Silk Mraket : ರೇಷ್ಮೆಗೂಡಿನ ಮಾರುಕಟ್ಟೆಗೆ ಆವಕ ಕುಸಿಯುವ ಭೀತಿ !

ರಾಮನಗರ: ಅನಧಿಕೃತ ರೇಷ್ಮೆ ಮಂಡಿಗಳು ತಲೆ ಎತ್ತುತ್ತಿರುವುದರಿಂದ ಏಷ್ಯಾದಲ್ಲಿಯೇ ಅತೀ ಹೆಚ್ಚು ವಹಿವಾಟು ನಡೆಯುವ ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆಗೆ ಆವಕವಾಗುತ್ತಿರುವ ಗೂಡಿನ ಪ್ರಮಾಣ ಕುಸಿಯುವ ಭೀತಿ ಎದುರಾಗಿದೆ.
ಈ ಮಾರುಕಟ್ಟೆ ಏಷ್ಯಾದಲ್ಲಿಯೇ ಅತಿ ಹೆಚ್ಚು ವಹಿವಾಟು ನಡೆಯುವ ಖ್ಯಾತಿ ಪಡೆದಿದೆ. ಆದರೆ, ಇತ್ತೀಚೆಗೆ ಆವಕವಾಗುತ್ತಿರುವ ಗೂಡಿನ ಪ್ರಮಾಣ ತೀವ್ರವಾಗಿ ಕುಸಿಯುತ್ತಿದೆ. ಎರಡು ವರ್ಷದ ಹಿಂದೆ 50 ರಿಂದ 75 ಟನ್ ರೇಷ್ಮೆಗೂಡು ಬರುತ್ತಿತ್ತು. ಆದರೀಗ 20 ರಿಂದ 25 ಟನ್ ಗೆ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮಯಾಗುವ ಆತಂಕವಿದೆ.
ಖಾಸಗಿ ರೇಷ್ಮೆಗೂಡಿನ ಮಂಡಿಗಳು ಆರಂಭವಾಗಲು ಕೆಲ ರೇಷ್ಮೆ ಬೆಳೆಗಾರರು ಕಾರಣರಾಗಿದ್ದಾರೆ. ಕೆಲ ರೈತರು ನೇರವಾಗಿ ರೀಲರ್ ಗಳ ಮನೆಗೆ ಗೂಡು ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ವಹಿವಾಟು ದಿನ ದಿನಕ್ಕೂ ಕುಸಿಯುತ್ತಿದೆ.
ಕಡಿಮೆ ದರಕ್ಕೆ ಖರೀದಿ, ಅಧಿಕ ಬೆಲೆಗೆ ಮಾರಾಟ :
ರಾಮನಗರ ರೇಷ್ಮೆ ಮಾರುಕಟ್ಟೆಯ ಐದು ಕಿ.ಮೀ ಸುತ್ತಮುತ್ತಲಿನ ಪ್ರದೇಶದಲ್ಲಿ ಅನಧಿಕೃತ ರೇಷ್ಮೆಮಂಡಿಗಳು ತಲೆ ಎತ್ತುತ್ತಿರುವುದು ಅಧಿಕಾರಿಗಳ ಹಾಗೂ ರೇಷ್ಮೆ ಬೆಳೆಗಾರರ ತಲೆನೋವಾಗಿ ಪರಿಣಮಿಸಿದೆ. ರಾಮನಗರ ರೇಷ್ಮೆ ಮಾರುಕಟ್ಟೆಗೆ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ, ಹಾವೇರಿ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರ ಪ್ರದೇಶದಿಂದಲೂ ಗೂಡು ಮಾರಾಟಕ್ಕೆಂದು ಆಗಮಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಇತರೆ ಕಂಪನಿಗಳು ರೇಷ್ಮೆ ಮಂಡಿಯನ್ನು ತೆರೆದು ವಹಿವಾಟು ಮಾಡುತ್ತಿದ್ದಾರೆ.
ಮಾರುಕಟ್ಟೆಗೆ ಬರುವ ಮಾರ್ಗದಲ್ಲೆ ರೇಷ್ಮೆ ಬೆಳೆಗಾರರನ್ನು ಅಡ್ಡಗಟ್ಟಿ ಬಲವಂತವಾಗಿ ಕೆಲ ರೀಲರ್ ಗಳು ರೈತರನ್ನು ತಮ್ಮ ಮನೆಗೆ ಕರೆದೊಯ್ದು ಗೂಡನ್ನು ಖರೀದಿಸುವ ಕೆಲಸ ನಡೆಯುತ್ತಿದೆ. ಅನಧಿಕೃತವಾಗಿ ತಲೆ ಎತ್ತಿರುವ ಈ ರೇಷ್ಮೆ ಮಂಡಿಗಳು ನೇರವಾಗಿ ಬೆಳೆಗಾರರನ್ನು ಸಂಪರ್ಕಿಸುತ್ತಿವೆ. ಹಣದ ಹಾಗೂ ಇತರೆ ಆಮೀಷಗಳನ್ನು ತೋರಿಸಿ, ಕಡಿಮೆ ಬೆಲೆಗೆ ರೇಷ್ಮೆ ಗೂಡು ಖರೀಸುತ್ತಿದ್ದಾರೆ. ನಂತರ ಮಾರುಕಟ್ಟೆಗೆ ತೆರಳಿ, ಅಧಿಕ ಬೆಲೆಗೆ ಗೂಡು ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಗಂಭೀರ ಕೇಳಿ ಬರುತ್ತಿದೆ.
ಕಾನೂನು ಹೋರಾಟಕ್ಕೆ ಸಿದ್ಧತೆ :
ರೈತರು ಬೆಳೆದ ಬೆಳೆಯನ್ನು ಸರ್ಕಾರಿ ವ್ಯವಸ್ಥೆಯ ಮೂಲಕವೇ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೆಲೆ ಏರಿಳಿತ ತಾತ್ಕಾಲಿಕವಾಗಿರಲಿದೆ. ಒಂದೊಮ್ಮೆ ಈ ಸ್ಥಳಕ್ಕೆ ಖಾಸಗೀ ಮಾರುಕಟ್ಟೆಗಳು ಬಂದರೇ, ಸರ್ಕಾರಿ ಸ್ಥಳವನ್ನು ಅವುಗಳೇ ಆಕ್ರಮಿಸಿಕೊಳ್ಳಲಿವೆ. ಹಾಗಾಗಿ ಪ್ರಾರಂಭದಲ್ಲಿ ಲಾಭ ಕಂಡರೂ, ನಂತರ ಕಾಲಘಟ್ಟದಲ್ಲಿ ಕಂಪನಿ ನಿರ್ಧರಿಸುವ ಮೌಲ್ಯಕ್ಕೆ ಬೆಳೆಗಾರರು ಮಾರಾಟ ಮಾಡಬೇಕಾಗುತ್ತದೆ.
ಜತೆಗೆ, ಮಾರುಕಟ್ಟೆಯನ್ನು ಖಾಸಗೀಕರಣಗೊಳಿಸಲು ಮುಂದಾಗುತ್ತದೆ. ಇದರಿಂದ ಸರ್ಕಾರದ ಗೂಡು ಖರೀದಿ ಸ್ಥಳವಾದ ಕೆಎಸ್ಎಂಬಿ ಸೇರಿದಂತೆ ಇತರೆ ಸಂಸ್ಥೆಗಳು ಬಾಗಿಲು ಹಾಕಬೇಕಾದ ಅನಿವಾರ್ಯತೆ ತಂದೊಡ್ಡಲಿದೆ ಎಂಬ ಆತಂಕ ರೇಷ್ಮೆ ಬೆಳೆಗಾರರು ಮತ್ತು ರೀಲರ್ ಗಳಿಗೆ ಕಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಅನೀಕೃತ ರೇಷ್ಮೆ ಮಂಡಿಗಳ ವಿರುದ್ಧ ಕಾನೂನು ಹೋರಾಟ ನಡೆಸುವ ಸಲುವಾಗಿಯೇ ಇತ್ತೀಚೆಗೆ ರೇಷ್ಮೆ ಬೆಳೆಗಾರರು, ರೀಲರ್ಸ್ಗಳು, ಚಾಕಿ ಸಾಕಾಣಿಕೆದಾರರು ಸೇರಿದಂತೆ ಪ್ರಮುಖರ ಸಭೆ ರಾಮನಗರದಲ್ಲಿಯೇ ನಡೆದಿದ್ದು, ಸರ್ಕಾರದ ಮೇಲೆ ಒತ್ತಡ ಹೇರುವ ಜತೆಗೆ ಕಾನೂನು ಹೋರಾಟದ ರೂಪುರೇಷೆಗಳ ಕುರಿತು ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ರಾಮನಗರ ರೇಷ್ಮೆ ನಗರಿಯಾಗಿದ್ದು, ಬಹುತೇಕ ಕುಟುಂಬಗಳ ರೇಷ್ಮೆ ಹಾಗೂ ಇದರ ಉಪ ಉತ್ಪನ್ನಗಳನ್ನೇ ನಂಬಿ ಜೀವನ ಸಾಗಿಸುತ್ತಿವೆ. ಅದರಲ್ಲೂ ಇತ್ತೀಚಿಗೆ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ದಾಖಲೆ ಮೊತ್ತದಲ್ಲಿ ರೇಷ್ಮೆ ಗೂಡು ಅಂದರೇ, 1042 ರೂಪಾಯಿಗೆ ಮಾರಾಟವಾಗಿತ್ತು. ಇದರ ಜತೆಗೆ, ಕೇಂದ್ರ ಸರಕಾರ ಆಮದು ರೇಷ್ಮೆಯ ಮೇಲೆ ಶೇ.5ರಷ್ಟು ಸುಂಕ ಹೆಚ್ಚಿಸಿದೆ. ಹಾಗಾಗಿ ದೇಶೀಯ ರೇಷ್ಮೆ ಗೂಡಿಗೆ ಬಂಗಾರದ ಬೆಲೆ ಬಂದಿದೆ. ಇದನ್ನು ಗಮನಿಸಿರುವ ಕೆಲವು ಕಂಪನಿಗಳು ಅನಧಿಕೃತ ಮಂಡಿಗಳನ್ನು ತೆರೆದು ಗೂಡು ವಹಿವಾಟು ನಡೆಸುತ್ತಿರುವ ಆರೋಪ ಕೇಳಿ ಬರುತ್ತಿದೆ.
ಖಾಸಗಿ ರೇಷ್ಮೆ ಮಂಡಿಗಳಿಗೆ ನಮ್ಮ ವಿರೋಧ ಇಲ್ಲ. ಆದರೆ, ಅವರೆಲ್ಲರೂ ಕಾನೂನು ವ್ಯಾಪ್ತಿಯೊಳಗೆ ಬರಬೇಕೆಂಬುದು ನಮ್ಮ ಉದ್ದೇಶ. ಹೀಗಾಗಿ ರೇಷ್ಮೆ ಉತ್ಪನ್ನದ 7 ಭಾಗೀದಾರರು ಸೇರಿ ರಾಜ್ಯ ಮಟ್ಟದ ಮೊದಲ ಸಭೆಯನ್ನು ರಾಮನಗರದಲ್ಲಿಯೇ ನಡೆಸಿ ಚರ್ಚೆ ನಡೆಸಲಾಗಿದೆ. ಈ ವೇಳೆ ಅನಧಿಕೃತ ಹಾಗೂ ಪರವಾನಗಿ ಇಲ್ಲದ ರೇಷ್ಮೆ ಮಂಡಿಗಳ ವಿರುದ್ಧ ಹೋರಾಟ ನಡೆಸುವ ಕುರಿತು ಚರ್ಚೆ ನಡೆಸಲಾಗಿದೆ ಎನ್ನುತ್ತಾರೆ. ರೇಷ್ಮೆ ಬೆಳೆಗಾರರ ಹಿತ ರಕ್ಷಣಾ ಸಮಿತಿಯ ಕಾರ್ಯದರ್ಶಿ ರವಿ.



