
ಮೊಗಾ: ಪಂಜಾಬ್ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದಾಗ ಮೊಗಾ ಜಿಲ್ಲೆಯ ಲಂಧೇಕೆ ಗ್ರಾಮದಲ್ಲಿ ಸಂಶಯಾಸ್ಪದ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ವರದಿಗಳ ನಂತರ ಬಾಲಿವುಡ್ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಕುಳಿತಿದ್ದ ಎಸ್‌ಯುವಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಸಾಚಾರ್ ಅವರು ಮೋಗಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಸೋನು ಸೂದ್ ಮತಗಟ್ಟೆ ಪ್ರವೇಶಿಸಲು ಯತ್ನಿಸುತ್ತಿದ್ದರು. ಈ ವೇಳೆ ಅವರ ಕಾರನ್ನು ಜಪ್ತಿ ಮಾಡಿ ಮನೆಗೆ ಕಳುಹಿಸಲಾಗಿದೆ. ಮನೆಯಿಂದ ಹೊರಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮೊಗಾ ಜಿಲ್ಲಾ ಪಿಆರ್‌ಒ ಪ್ರದ್ಭದೀಪ್ ಸಿಂಗ್ ಹೇಳಿದ್ದಾರೆ.
ಅನುಮಾನಾಸ್ಪದ ಚಟುವಟಿಕೆಯ ಆಧಾರದ ಮೇಲೆ ಎಸ್‌ಯುವಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ದೇವಿಂದರ್ ಸಿಂಗ್ ಹೇಳಿದ್ದಾರೆ. ಲಂಧೇಕೆ ಗ್ರಾಮದ ಮತಗಟ್ಟೆ ಬಳಿ ಎಸ್‌ಯುವಿ ಸುತ್ತಾಡುತ್ತಿರುವ ಬಗ್ಗೆ ನಮಗೆ ದೂರು ಬಂದಿದೆ. ನಾವು ಅದನ್ನು ವಶಪಡಿಸಿಕೊಂಡಿದ್ದೇವೆ. ಮುಂದಿನ ಕ್ರಮ ನಡೆಯುತ್ತಿದೆ ಎಂದ ಅವರು ಹೇಳಿದ್ದಾರೆ. ಈ ವಾಹನ ಸೋನು ಸೂದ್ ಅವರ ಪರಿಚಯಸ್ಥರಿಗೆ ಸೇರಿದ್ದು, ಅವರು ಮೊಗಾದಲ್ಲಿ ಚುನಾವಣಾ ಪ್ರಚಾರದ ವೇಳೆ ಅದನ್ನು ಬಳಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.



