ಖಿಲಾಡಿಗೆ ಸುತ್ತಿಕೊಂಡ ವಿವಾದ: ಟಾಲಿವುಡ್ ಮಂದಿಗೆ ಬುದ್ಧಿ ಕಲಿಸುತ್ತೇನೆ ಎಂದ ನಿರ್ಮಾಪಕ

ಟಾಲಿವುಡ್ ನಟ ರವಿತೇಜ ನಟನೆಯ ಕಿಲಾಡಿ ಸಿನಿಮಾ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದೆ. ತೆಲುಗಿನಲ್ಲಿ ತಯಾರಾಗಿರೋ ಕಿಲಾಡಿ ಇತರ ಭಾಷೆಗಳಿಗೂ ಡಬ್ ಆಗಿದ್ದು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಸಿನಿಮಾ ರಿಲೀಸ್ ಆದ ಹೊಸ್ತಿಲಲ್ಲೇ ವಿವಾದವೊಂದು ಸುತ್ತಿಕೊಂಡಿದೆ.
ಕಿಲಾಡಿ… ಈ ಹೆಸ್ರು ಕೇಳಿದ್ರೆ ಮೊದಲಿಗೆ ನೆನಪಾಗೋದೆ ಅಕ್ಷಯ್ ಕುಮಾರ್. ಹೌದು 1992ರಲ್ಲಿ ತೆರೆಕಂಡ ಅಬ್ಬಾಸ್ ಮುಸ್ತಾನ್ ನಿರ್ದೇಶನದ, ರತನ್ ಜೈನ್ ನಿರ್ಮಿಸಿದ್ದ ಈ ಸಿನಿಮಾ ನಟ ಅಕ್ಷಯ್ಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ನೀಡಿತ್ತು. ಈ ಚಿತ್ರದ ಬಳಿಕ ಅಕ್ಕಿ ಕಿಲಾಡಿ ಅಂತಲೇ ಫೇಮಸ್ ಆಗಿ ಬಿಟ್ರು.
ಇದೇ ಖಿಲಾಡಿ ಹೆಸರಿನಲ್ಲಿ ಬರೋಬ್ಬರಿ 30 ವರ್ಷಗಳ ಬಳಿಕ ರಮೇಶ್ ವರ್ಮ್ ನಿರ್ದೇಶನದ ರವಿತೇಜಾ ನಟನೆಯ ಸಿನಿಮಾ ತೆಲುಗಿನಲ್ಲಿ ರಿಲೀಸ್ ಆಗಿದ್ದು ಇತರ ಭಾಷೆಗಳಿಗೂ ಡಬ್ ಆಗಿದೆ. ಇದು ಅಕ್ಷಯ್ ನಟನೆಯ ಖಿಲಾಡಿ ನಿರ್ಮಾಪಕ ರತನ್ ಜೈನ್ ಅವರನ್ನ ಕೆರಳಿಸಿದೆ. ಸಿನಿಮಾದ ನಿರ್ಮಾಪಕರು ನನ್ನ ಒಪ್ಪಿಗೆ ಇಲ್ಲದೆ ನನ್ನ ಸಿನಿಮಾದ ಹೆಸರನ್ನ ಇಟ್ಟಿದ್ದಾರೆ. ಹಾಗಾಗಿ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸಿನಿಮಾದ ವಿತರಕರು, ಡಬ್ಬಿಂಗ್ ರೈಟ್ಸ್ ಹೊಂದಿರುವವರು ಹಾಗೂ ನಿರ್ಮಾಪಕರ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಸಿನಿಮಾದ ಹಿಂದಿ ಆವೃತ್ತಿ ಮಾತ್ರವೇ ಅಲ್ಲ ತೆಲುಗು ಆವೃತ್ತಿ ಸಹ ಖಿಲಾಡಿ ಹೆಸರು ಹೊಂದುವಂತಿಲ್ಲ ಎಂದು ರತನ್ ಜೈನ್ ಆಗ್ರಹಿಸಿದ್ದಾರೆ.
ನಮ್ಮ ಅರ್ಜಿಯ ವಿಚಾರಣೆ ನಿನ್ನೆ ನಡೆದಿದೆ. ಈಗಾಗಲೇ ಬಹಳ ತಡವಾಗಿದೆ. ಹಾಗಾಗಿ ಸಿನಿಮಾದ ಬಿಡುಗಡೆ ತಡೆಯಲು ಈಗ ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ನಮಗೆ ವಿಷಯ ಗೊತ್ತಾಗಿದ್ದೇ ತಡವಾಗಿ. ನಾವು ಫೆಬ್ರವರಿ 10ರಂದು ಅರ್ಜಿ ಹಾಕಿದ್ದೆವು. ಆದರೆ ಅರ್ಜಿಯ ವಿಚಾರಣೆ ನಿನ್ನೆ ನಡೆಯಿತು. ಖಿಲಾಡಿ ಸಿನಿಮಾದವರು ಬೇಕೆಂದೇ ಸಿನಿಮಾದ ಟ್ರೈಲರನ್ನು ತಡವಾಗಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.
ನಮಗೆ ಇಷ್ಟು ದಿನ ಈ ಸಿನಿಮಾದ ಬಗ್ಗೆ ಗೊತ್ತೇ ಇರಲಿಲ್ಲ. ಫೆಬ್ರವರಿ 8ರಂದು ಟ್ರೈಲರ್ ಬಿಡುಗಡೆಯಾದಾಗಲೇ ವಿಷಯ ಗೊತ್ತಾಗಿದ್ದು. ತೆಲುಗಿನಲ್ಲಿ ಬಾಲಿವುಡ್ ಸಿನಿಮಾದ ಹೆಸರು ಇಟ್ಟು ಸಿನಿಮಾ ಮಾಡುತ್ತಿದ್ದಾರೆಂದು ಮುಂಬೈನಲ್ಲಿ ಕೂತು ನನಗೆ ಹೇಗೆ ಗೊತ್ತಾಗಬೇಕು ಎಂದು ರಜತ್ ಜೈನ್ ಪ್ರಶ್ನಿಸಿದ್ದಾರೆ.
ನಾನು ಅವರಿಗೆ ಸರಿಯಾದ ಬುದ್ಧಿ ಕಲಿಸಲು ಯೋಚಿಸಿದ್ದೇನೆ. ಹಾಗಾಗಿ ಕೇಸು ಹಾಕಿದ್ದೇನೆ. ಮುಂದಿನ ವಿಚಾರಣೆ ಫೆಬ್ರವರಿ 16ಕ್ಕೆ ಇದೆ. ತೆಲುಗಿನ ಕಿಲಾಡಿ ಸಿನಿಮಾದವರಿಗೆ ದಂಡ ಹಾಕಬೇಕು. ಜೊತೆಗೆ ಸಿನಿಮಾವನ್ನ ಒಟಿಟಿಯಲ್ಲಿ ಬಿಡುಗಡೆ ಮಾಡುವಾಗ ಟೈಟಲ್ ಬದಲಾಯಿಸ ಬೇಕು ಎಂದಿದ್ದಾರೆ.




