ಮಹೇಶ್ ಬಾಬುಗೆ ಜೋಡಿಯಾಗಲಿರೋ ಶ್ರೀಲೀಲಾ

ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ನ ಮೂರನೇ ಸಿನಿಮಾ ಇತ್ತೀಚೆಗಷ್ಟೆ ಸೆಟ್ಟೇರಿದೆ. ಚಿತ್ರದಲ್ಲಿ ಟಾಲಿವುಡ್ ಪ್ರೀನ್ಸ್ಗೆ ಜೋಡಿಯಾಗಿ ನಟಿ ಪೂಜಾ ಹೆಗ್ಡೆ ಬಣ್ಣ ಹಚ್ಚಲಿದ್ದಾರೆ. ಇದೀಗ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರ ಬಿದಿದ್ದು ಕನ್ನಡದ ನಟಿ ಮಹೇಶ್ಗೆ ಜೋಡಿಯಾಗಲಿದ್ದಾರಂತೆ.
ಅತಡು ಹಾಗೂ ಖಲೇಜ ಚಿತ್ರಗಳ ಮೂಲಕ ಪ್ರೇಕ್ಷಕರ ದಿಲ್ ಖುಷ್ ಮಾಡಿದ್ದ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಮೂರನೇ ಬಾರಿಗೆ ಒಂದಾಗ್ತಿದ್ದಾರೆ. ಹೀಗಾಗಿ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗ್ಲೆ ನಟಿ ಪೂಜಾ ಹೆಗ್ಡೆಯನ್ನ ಚಿತ್ರತಂಡ ಆಯ್ಕೆ ಮಾಡಿದೆ. ಇದೀಗ ಕನ್ನಡತಿ ನಟಿ ಶ್ರೀಲೀಲಾ ಮಹೇಶ್ಗೆ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಆದ್ರೆ ಈ ಬಗ್ಗೆ ಚಿತ್ರತಂಡವಾಗಲಿ, ನಟಿ ಶ್ರೀಲೀಲಾ ಆಗಲಿ ತುಟಿ ಎರಡು ಮಾಡಿಲ್ಲ.
ಸಿನಿಮಾದ ಎರಡನೇ ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಶ್ರೀಲೀಲಾ ಹೆಸರನ್ನ ಮಹೇಶ್ ಬಾಬು ಅವರಿಗೆ ಸೂಚಿಸಿದ್ದಾರೆ. ಇದಕ್ಕೆ ಮಹೇಶ್ ಬಾಬು ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಅನ್ನೋ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿ ಬರ್ತಿದೆ.
ನಟಿ ಶ್ರೀಲೀಲಾ ಈಗಾಗ್ಲೆ ತೆಲುಗಿನ ಪೆಳ್ಳಿ ಸಂದಡಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಜನ ಮೆಚ್ಚುಗೆ ಘಳಿಸದೇ ಹೋದ್ರು ನಟಿ ಶ್ರೀಲೀಲಾ ಮಾತ್ರ ತೆಲುಗು ಮಂದಿಯ ಮನದಲ್ಲಿ ಅಚ್ಚಾಗಿ ಬಿಟ್ಟಿದ್ದಾರೆ. ನಟನೆ ಹಾಗೂ ಗ್ಲಾಮರ್ನಿಂದಲೇ ಸಿನಿ ರಸಿಕರ ಮನ ಗೆದ್ದ ಶ್ರೀಲೀಲಾಗೆ ಇದೀಗ ಟಾಲಿವುಡ್ನಿಂದ ಸಾಕಷ್ಟು ಆಫರ್ಗಳು ಬರ್ತಿವೆ.




