ತೋತಾಪುರಿ ಟೀಸರ್ ನೋಡಿ ಗರಂ ಆದ ಸಿನಿ ರಸಿಕರು

ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ನವರಸ ನಾಯಕ ಜಗ್ಗೇಶ್ ನಟನೆಯ ನಿರೀಕ್ಷಿತ ಸಿನಿಮಾ ತೋತಾಪುರಿ. ಈಗಾಗ್ಲೆ ನೀರ್ ದೋಸೆ ಸಿನಿಮಾದ ಮೂಲಕ ಸೂಪರ್ ಸಕ್ಸಸ್ ಪಡೆದುಕೊಂಡಿರೋ ಜೋಡಿಯ ಮತ್ತೊಂದು ಸಿನಿಮಾಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ತೋತಾಪುರಿ ಚಿತ್ರಕ್ಕಾಗಿ ಕಾದು ಕೂತಿರೋ ಅಭಿಮಾನಿಗಳು ಇದೀಗ ಚಿತ್ರತಂಡದ ವಿರುದ್ಧ ಗರಂ ಆಗಿದ್ದಾರೆ.
ತೋತಾಪುರಿ ಚಿತ್ರತಂಡದಿಂದ ಯಾವಾಗ ಅಪ್ಡೇಟ್ ಸಿಗುತ್ತೆ ಅಂತ ಕಾದು ಕೂತಿದ್ದ ಅಭಿಮಾನಿಗಳಿಗೆ ಚಿತ್ರತಂಡ ಸಾಂಗ್ ಟೀಸರ್ ಬಿಡುಗಡೆ ಮಾಡೋದಾಗಿ ಹೇಳಿ ಖುಷಿ ನೀಡಿತ್ತು. ಸಾಂಗ್ ಟೀಸರ್ ನೋಡೋಕೆ ಖುಷಿಯಿಂದ ಕಾದು ಕೂತಿದ್ದ ಅಭಿಮಾನಿಗಳು ಟೀಸರ್ ನೋಡಿ ಗರಂ ಆಗಿದ್ದಾರೆ.
ಇತ್ತೀಚೆಗೆ ಬಿಡುಗಡೆ ಆಗಿರುವ ಸಾಂಗ್ ಟೀಸರ್ನಲ್ಲಿ ಸಣ್ಣದಾದ ಹಾಡಿನ ಝಲಕ್ ತೋರಿಸಲಾಗಿದೆ. ರಿಲೀಸ್ ಆಗಿರುವ ವಿಡಿಯೋದಲ್ಲಿ ಹಿಂದಿ ಹಾಗೂ ಉರ್ದು ಭಾಷೆಯಲ್ಲಿರುವ ಸಾಹಿತ್ಯ ಕಂಡು ಅಭಿಮಾನಿಗಳು ಚಿತ್ರತಂಡದ ಮೇಲೆ ಕೋಪಗೊಂಡಿದ್ದಾರೆ.
ಕನ್ನಡ ಸಿನಿಮಾದಲ್ಲಿ ಹಿಂದಿ ಹಾಡು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಜೊತೆಗೆ ಸದಾ ಕನ್ನಡ ನಾಡು, ನುಡಿ ಎನ್ನುವ ನವರಸ ನಾಯಕ ಜಗ್ಗೇಶ್ ಈ ಹಾಡು ಮಾಡಲು ಒಪ್ಪಿಕೊಂಡ್ರಾ, ಇದು ಅವರ ಅರಿವಿಗೆ ಬರಲಿಲ್ವಾ? ಅದರಲ್ಲೂ ಹಿಂದಿ ಭಾಷೆ ಹೇರಿಕೆ ಬಗ್ಗೆ ಚರ್ಚೆ ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ ಅಪ್ಪಟ ಕನ್ನಡ ಸಿನಿಮಾವೊಂದು ಈ ರೀತಿಯ ಉದ್ಧಟತನ ತೋರಿರುವುದು ಯಾಕೆ ಎಂದು ಚಿತ್ರತಂಡದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ತೋತಾಪುರಿ ಚಿತ್ರವನ್ನ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆ ಮಾಡಲು ಪ್ಲಾನ್ ನಡೆಯುತ್ತಿದೆ. ಇದೇ ಕಾರಣಕ್ಕೆ ಈ ರೀತಿಯ ಹಿಂದಿ ಹಾಡಿನ ಟೀಸರ್ ಬಿಡುಗಡೆ ಮಾಡಿರಬಹುದಾ ಅನ್ನೋ ಪ್ರಶ್ನೆ ಶುರುವಾಗಿದೆ. ಇಷ್ಟೆಲ್ಲಾ ಆದ್ರೂ ಚಿತ್ರತಂಡ ಮಾತ್ರ ಇದುವರೆಗೂ ಈ ಬಗ್ಗೆ ಯಾವುದೇ ರಿಯಾಕ್ಷನ್ ನೀಡಿಲ್ಲ.




