
ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಖಾಲಿಯಿರುವ ನಾಲ್ಕು ಸ್ಥಾನಗಳ ಭರ್ತಿ ಸಂಬಂಧ ಪಕ್ಷ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಚಿವ ಸ್ಥಾನದ ಆಕಾಂಕ್ಷಿಗಳ ಬಯಕೆ ಸಹಜ. ಎಲ್ಲವೂ ಪಕ್ಷ ವರಿಷ್ಠರ ಗಮನದಲ್ಲಿದೆ. ಅವರು ಈ ಬಗ್ಗೆ ಚರ್ಚೆಗೆ ಯಾವಾಗ ಕರೆಯುತ್ತಾರೆಯೋ ಆಗ ಎಲ್ಲಾ ವಿವರಗಳನ್ನು ಅವರಿಗೆ ಸಲ್ಲಿಸುವೆ ಎಂದರು.
ಸಚಿವ ಉಮೇಶ್ ಕತ್ತಿ ತಮ್ಮ ಬೆಳಗಾವಿ ನಿವಾಸದಲ್ಲಿ ಜಾರಕಿಹೊಳಿ ಸೋದರರನ್ನು ಹೊರತುಪಡಿಸಿ ಕೆಲ ಬಿಜೆಪಿ ಶಾಸಕರೊಂದಿಗೆ ನಡೆಸಿರುವ ಸಭೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಅವರದು ರಹಸ್ಯ ಸಭೆ ಆಗಿರುವುದರಿಂದ ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಆದಾಗ್ಯೂ ಪಕ್ಷ ಮುಖಂಡರು ಹಲವು ಸಂದರ್ಭದಲ್ಲಿ ಸೇರುತ್ತಾರೆ. ಕಾಂಗ್ರೆಸ್ ಪಕ್ಷದವರು ಸೇರುತ್ತಾರೆ. ಅದೇ ರೀತಿ ಬಿಜೆಪಿಯವರು ಸೇರಿದ್ದಾರೆ. ಸಭೆಯ ಬಗ್ಗೆ ತಮಗೆ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಿಗಮ-ಮಂಡಳಿ ಪಕ್ಷಕ್ಕೆ ಬಿಟ್ಟಿದ್ದು
ನಿಗಮ-ಮಂಡಳಿಗಳ ಸ್ಥಾನ ಭರ್ತಿ ಸಂಬಂಧ ನನ್ನ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ. ಪಕ್ಷದವರು ಅದನ್ನು ನೋಡುತ್ತಿದ್ದಾರೆ. ಅದು ಅವರ ಮೇಲೆ ಅವಲಂಬಿತವಾಗಿದೆ. ಅವರು ಪರಾಮರ್ಶೆ ನಡೆಸಿ ವರದಿ ನೀಡಿದ ಮೇಲೆ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
25ರಿಂದ ಬಜೆಟ್ ಪೂರ್ವಭಾವಿ ಸಭೆ
ನಾನು ಹೇಗೆ ಚರ್ಚಿಸಲಿ ಎಂದರು. ಬಜೆಟ್ ಗೆ ಸಂಬಂಧಿಸಿದಂತೆ ಡಿಸೆಂಬರ್ ನಲ್ಲೇ ಹಣಕಾಸು ಹಾಗೂ ಆದಾಯ ಬರುವಂತಹ ಇಲಾಖೆಗಳ ಆಂತರೀಕ ಸಭೆಗಳನ್ನು ನಡೆಸಿದ್ದೇನೆ. ಬರುವ ಜ.25ರಿಂದ ಹಣಕಾಸು ಇಲಾಖೆ ಜತೆ ಇನ್ನೊಂದು ಸಭೆ ನಡೆಸುತ್ತೇನೆ. ನಂತರ ಇಲಾಖೆಗಳ ಪ್ರಸ್ತಾವನೆ ಹಾಗೂ ಸಂಘ-ಸಂಸ್ಥೆಗಳ ಜತೆ ಚರ್ಚಿ ಬಜೆಟ್ ಮಂಡನೆಗೆ ಅನುವಾಗುತ್ತೇನೆ ಎಂದೂ ಸಿಎಂ ಹೇಳಿದರು.
ಇದೇ 28 ರಂದು ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಆರು ತಿಂಗಳಾಗುತ್ತಿದೆ. ಈ ಅವಧಿಯಲ್ಲಿ ಸರ್ಕಾರದ ಸಾಧನೆ ಕುರಿತು ಪುಸ್ತಕ ಬಿಡುಗಡೆ ಮಾಡಲಾಗುವುದು ಎಂದರು.
ಕಾಂಗ್ರೆಸ್ ಪಾದಯಾತ್ರೆಗೆ ಸಿದ್ದತೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿ, ಅದು ಅವರ ಪಕ್ಷದ ನಿರ್ಣಯ. ನಾನು ಹೇಗೆ ಕಾಮೆಂಟ್ ಮಾಡಲಿ ಎಂದೂ ಸಿಎಂ ಹೇಳಿದರು.
ಅಧ್ಯಯನ ನಂತರ ತೀರ್ಮಾನ
ಕೋವಿಡ್ ಬಗ್ಗೆ ಈಗಾಗಲೇ ಕೆಲವು ನಿರ್ಣಯ ಮಾಡಿದ್ದೇವೆ. ವೀಕೆಂಡ್ ಕರ್ಫ್ಯೂ ತೆಗೆದಿದ್ದೇವೆ. ಕೋವಿಡ್ ಯಾವ ರೀತಿ ನಮ್ಮ ರಾಜ್ಯದಲ್ಲಿ ಮುಂದುವರಿಯುತ್ತಿದೆ. ಕೋವಿಡ್ ಬಂದವರ ಸ್ಥಿತಿಗತಿ ಏನು ಎಲ್ಲವನ್ನೂ ಪರಿಶೀಲಿಸಬೇಕಾಗುತ್ತದೆ. ಕೋವಿಡ್ ವರ್ತನೆ ಅಧ್ಯಯನ ಮಾಡಿ ನಂತರ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಕಚೇರಿಯಲ್ಲಿ ಬಿಬಿಎಂಪಿ ವಿಚಾರವಾಗಿ ಸಭೆ ಇದೆ. ಆರು ತಿಂಗಳ ಕುರಿತು ಸುದ್ದಿಗೋಷ್ಠಿ ಕರೆದು ತೀರ್ಮಾನ.
