ಹೆಣ ಹೂಳಲೂ ಜಾಗವಿಲ್ಲ; ಸ್ವಂತ ಜಾಗದಲ್ಲೇ ಅಂತ್ಯ ಸಂಸ್ಕಾರ!

ದೇವನಹಳ್ಳಿ: ಗ್ರಾಮದಲ್ಲಿ ಸ್ಮಶಾನವೇ ಇಲ್ಲ. ಹಲವು ವರ್ಷಗಳಿಂದ ಇಲ್ಲಿ ಮೃತರಾದವರಿಗೆ ಅವರವರ ಸ್ವಂತ ಜಮೀನಿನಲ್ಲೇ ಶವಸಂಸ್ಕಾರ ನಡೆಸಲಾಗುತ್ತಿದೆ.
ಜಮೀನು ಇಲ್ಲದವರು ಯಾರಾದರೂ ಸತ್ತರೆ ಶವವನ್ನು ಎಲ್ಲಿಗೆ ಕೊಂಡೊಯ್ಯಬೇಕು? ಹೀಗೆಂದು ಪ್ರಶ್ನಿಸುತ್ತಿರುವ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಆಲೂರು ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯ ಸುಣ್ಣಘಟ್ಟ ಗ್ರಾಮದ ಜನರು ತಮಗೆ ಸ್ಮಶಾನ ಜಾಗ ನೀಡಲೇಬೇಕೆಂದು ಒತ್ತಾಯಿಸಿದ್ದಾರೆ.
ಸ್ಮಶಾನಕ್ಕೆ ಸುಣ್ಣಘಟ್ಟದ ಸ.ನಂ.88ರಲ್ಲಿ 3-26 ಎಕರೆ ಜಮೀನನ್ನು 1952ರಲ್ಲೇ ನೀಡಲಾಗಿತ್ತು. ನಂತರ 2007 ರಲ್ಲಿ ಕೆಐಎಡಿಬಿಯಿಂದ ಭೂಸ್ವಾಧೀನವಾಯಿತು. ಆಗ ಸ್ಮಶಾನ ಜಾಗವನ್ನು ಬಿಡದೆ ಕಾಂಪೌಂಡ್ ಕಟ್ಟಿಕೊಂಡರು. ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಾಗ ಕೆಐಎಡಿಬಿಯವರು ಸಭೆ ಕರೆದು ಸ್ಮಶಾನಕ್ಕೆ ಬೇರೆ ಕಡೆ ಜಾಗ ಕೊಡುತ್ತೇವೆಂದು ಆಶ್ವಾಸನೆ ಕೊಟ್ಟಿದ್ದರು.
ಆಗಲೂ ಗ್ರಾಮಸ್ಥರೆಲ್ಲ ಸೇರಿ ಸ್ಮಶಾನ ಜಾಗಕ್ಕಾಗಿ ಅರ್ಜಿ ಕೊಟ್ಟೆವು. ಆದರೆ ಇನ್ನೂ ಸ್ಮಶಾನ ಜಾಗ ಸಿಕ್ಕಿಲ್ಲ. ಗ್ರಾಮದಲ್ಲಿ ಯಾರಾದರೂ ಮೃತರಾದಾಗ ಸ್ವಂತ ಜಾಗದಲ್ಲೇ ಶವಸಂಸ್ಕಾರ ಮಾಡಲಾಗುತ್ತಿದೆ ಎಂದು ಗ್ರಾಮಸ್ಥ ಶಿವರಾಜ್ ಹೇಳಿಕೊಂಡರು.
ಗ್ರಾಮದಲ್ಲಿ ಜನಸಂಖ್ಯೆ ಜಾಸ್ತಿ ಇದೆ. ಕೆಲವರಿಗೆ ಜಮೀನು ಇಲ್ಲ, ಅವರು ಎಲ್ಲಿ ಶವ ಸಂಸ್ಕಾರ ಮಾಡಬೇಕು? ಜನಪ್ರತಿನಿಧಿಗಳು, ಆಡಳಿತ ವರ್ಗದವರು ಯಾಕಾಗಿ ಇಷ್ಟು ನಿರ್ಲಕ್ಷ್ಯ ವಹಿಸಿದ್ದಾರೋ ತಿಳಿಯುತ್ತಿಲ್ಲ. ಈ ಭಾಗದ 126 ಎಕರೆ ಜಮೀನು ಕೆಐಎಡಿಬಿಗೆ ಹಸ್ತಾಂತರವಾಗಿದೆ.
ನಾವೆಲ್ಲ ಜಮೀನೂ ಕಳೆದುಕೊಂಡಿದ್ದೇವೆ. ಇತ್ತ ಹೆಣ ಹೂಳಲೂ ಜಾಗವಿಲ್ಲ. ಫ್ಯಾಕ್ಟರಿಗಳಲ್ಲಿ ಕೆಲಸವೂ ಕೊಡುತ್ತಿಲ್ಲ. 35 ಲಕ್ಷಕ್ಕೆ ಕೊಂಡ ಜಮೀನನ್ನು ಒಂದೂವರೆ ಕೋಟಿಗೆ ಮಾರಿಕೊಂಡಿದ್ದಾರೆ ಎಂದು ಗ್ರಾಪಂ ಸದಸ್ಯ ಮೂರ್ತಿ ದೂರಿದರು.




