ಕಲಬುರಗಿಯ ಯುವತಿಯರ ಸಾಧನೆ : ಒಂದೇ ಬಾರಿಗೆ ಪಿಎಸ್‌ಐ ಹುದ್ದೆಗೆ ಆಯ್ಕೆ

ಕಲಬುರಗಿ: ಸಾಧಿಸುವ ಛಲಹೊಂದಿದ್ದರೆ ಯಾರಬೇಕಾದ್ರು ಸಾಧನೆ ಮಾಡಬಹುದು ಎಂಬುವುದಕ್ಕೆ ಜಿಲ್ಲೆ ಯಳಸಂಗಿ ಗ್ರಾಮದ ಈ ಇಬ್ಬರು ಯುವತಿಯರು ಸಾಕ್ಷಿಯಾಗಿದ್ದಾರೆ.
ಇತ್ತೀಚೆಗೆ ಪ್ರಕಟಗೊಂಡ ಪೋಲೀಸ್ ಸಬ್ ಇನ್ಸ್‍ಪೆಕ್ಟರ್ (ಪಿಎಸ್‍ಐ) ಹುದ್ದೆಗಳ ನೇಮಕಾತಿಯಲ್ಲಿ ಜಿಲ್ಲೆಯ ಆಳಂದ ತಾಲೂಕಿನ ಯಳಸಂಗಿ ಗ್ರಾಮದ ಇಬ್ಬರು ಯುವತಿಯರು ಪಿಎಸ್‍ಐ ಹುದ್ದೆಗೆ ಆಯ್ಕೆಯಾಗಿ ಗ್ರಾಮಕ್ಕೆ ಗ್ರಾಮದ ಹಿರಿಮೆಯನ್ನು ಹೆಚ್ವಿಸಿದ್ದಾರೆ.
ರೇವತಿ ಎಸ್. ಪಾಟೀಲ್ ಹಾಗೂ ಸಂಧ್ಯಾರಾಣಿ ಎಚ್. ಕುರನಳ್ಳಿ ನೂತನವಾಗಿ ಪಿಎಸ್‍ಐಯಾಗಿ ಸಾಧನೆ ಮಾಡಿರುವ ಯುವತಿಯರಾಗಿದ್ದು, ಕಲ್ಯಾಣ ಕರ್ನಾಟಕ ವೃಂದದ 25 ಹುದ್ದೆಗಳ ನೇಮಕಾತಿಯಲ್ಲಿ ರೇವತಿ 14ನೇ ರ್ಯಾಂಕ್ ಹಾಗೂ ಸಂಧ್ಯಾರಾಣಿ 25ನೇ ರ್ಯಾಂಕ್ ಪಡೆದು ಪಿಎಸ್ ಐ ಆಗಿ ಆಯ್ಕೆಯಾಗಿದ್ದಾರೆ. ರೇವತಿ ಶಾಂತಗೌಡ ಪಾಟೀಲ್ ಅವರು ಸದ್ಯ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಕೇರಿ ಪೋಲೀಸ ಠಾಣೆಯಲ್ಲಿ ಕಳೆದ ವರ್ಷದಿಂದ ಪೋಲೀಸ್ ಕಾನ್ಸ್‍ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ಸಂಧ್ಯಾರಾಣಿ ಹುಸೇನಪ್ಪ ಕುರನಳ್ಳಿ ಅವರ ಸಹ ಇತ್ತೀಚೆಗೆ ನೀರಾವರಿ ಇಲಾಖೆಯಲ್ಲಿ ಅಸಿಸ್ಟಂಟ್ ಎಂಜಿನಿಯರ್ ಆಗಿ ಆಯ್ಕೆಯಾಗಿದ್ದರು. ಕೆಲಸದ ಒತ್ತಡದ ನಡುವೆಯೂ ಈ ಇಬ್ಬರು ಯುವತಿಯರ ಗುರಿ ಮುಟ್ಟುವುದರ ಜೊತೆಗೆ ಗ್ರಾಮಕ್ಕೆ ಡಬಲ್ ಪಿಎಸ್ಐ ಗರಿ ತಂದುಕೊಟ್ಟಿದ್ದಾರೆ.



