ರಾಮನಗರದ ಹಾಡು ಹಕ್ಕಿಗೆ ಒಲಿದು ಬಂದ ಪ್ರಶಸ್ತಿ

ರಾಮನಗರ: ಕಳೆದ 45 ವರ್ಷಗಳಿಂದ ಹಾಡುತ್ತ ಬಂದ ಹಾಡುಹಕ್ಕಿಯ ಉತ್ಸಾಹ, ಇಳಿವಯಸ್ಸಿನಲ್ಲೂ ಕುಗ್ಗಿಹೋಗಿಲ್ಲ. ಈವರೆಗಿನ ಜೀವನದಲ್ಲಿಡೀ ಹಾಡುತ್ತಾ ಕಳೆದ ಈ ಹಾಡುಹಕ್ಕಿಗೆ ಈ ಬಾರಿಯ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿದೆ.
ಈ ಹಾಡು ಹಕ್ಕಿಯೇ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಬಿಜ್ಜಹಳ್ಳಿ ಗ್ರಾಮದ ಚಿಕ್ಕಮ್ಮ. 72ರ ಹರೆಯದ ಅಜ್ಜಿಗೆ ಅಕಾಡೆಮಿ ಪ್ರಶಸ್ತಿ ಪ್ರಕಟವಾದ ದಿನ ಅವರ ಮನೆಯಲ್ಲಿ ಸಂಭ್ರಮದ ವಾತವರಣ ನಿರ್ಮಾಣವಾಗಿತ್ತು.
ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿರುವ ಚಿಕ್ಕಮ್ಮ ಅವರದು ಜನಪದ ಕಲಾವಿದರ ಕುಟುಂಬ. ಚಿಕ್ಕಮ್ಮ ಅವರ ತಂದೆ ಚಿಕ್ಕಯ್ಯ ತಮಟೆ ಕಲಾವಿದರಾಗಿದ್ದರು, ತಾಯಿ ಚಿಕ್ಕಚೂಡಮ್ಮ ಸೋಬಾನೆ ಪದಗಳನ್ನು ಹಾಡುತ್ತಿದ್ದರು.
ಚಿಕ್ಕಮ್ಮ ಅವರಿಗೆ ಮುನಿಚಿಕ್ಕಮ್ಮ, ಮುನಿಚೂಡಮ್ಮ, ಗೌರಮ್ಮ, ಪುಟ್ಟಮ್ಮ, ಚಿಕ್ಕಮಣಮ್ಮ, ನಗಾರಿ ಮುನಿಯಪ್ಪ ಸೇರಿ ಐದು ಜನ ಸಹೋದರಿಯರು, ಒಬ್ಬ ಸಹೋದರ ಇದ್ದಾರೆ. ಇವರೆಲ್ಲರೂ ಕಲಾವಿದರಾಗಿದ್ದಾರೆ.
ಜಾನಪದ ಅಕಾಡೆಮಿ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿರುವ ಚಿಕ್ಕಮ್ಮ ಶನಿವಾರ 24×7 ಲೈವ್ ಕನ್ನಡ ಡಿಜಿಟಲ್ ಜತೆ ಮನ ಬಿಚ್ಚಿ ಮಾತನಾಡಿದರು. ಗತಕಾಲದ ಬದುಕನ್ನು ಮೆಲುಕು ಹಾಕಿದರು.




