Latestಉತ್ತರ ಕನ್ನಡಜಿಲ್ಲಾ ಸುದ್ದಿ

ಸ್ವಚ್ಛ ಭಾರತ ಅಭಿಯಾನಕ್ಕೆ ಸೆಡ್ಡು ಹೊಡೆದ ಗೋಕರ್ಣ ಗ್ರಾಮ ಪಂಚಾಯತ್

ಕಾರವಾರ : ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಹೆಸರಾಂತ ಪ್ರವಾಸಿ ತಾಣ ಗೋಕರ್ಣ ಇದೀಗ ಕಸದ ತಾಣವಾಗಿ ಮಾರ್ಪಾಡಾಗುತ್ತಿದೆ. ವಾರಾಂತ್ಯದ ಕರ್ಪ್ಯೂ ಹಿನ್ನೆಲೆಯಲ್ಲಿ ಎಲ್ಲೆಡೆ ಜನರಿಲ್ಲದೆ ಬಿಕೋ ಎನ್ನುತ್ತಿದ್ದರೆ, ಇಲ್ಲಿಗೆ ಬಂದು ಹೋದ ಪ್ರವಾಸಿಗರು ಎಸೆದು ಹೋದ ತ್ಯಾಜ್ಯ ವಸ್ತುಗಳು ಎಲ್ಲೆಡೆ ಗೋಚರಿಸುತ್ತಿದೆ. ರಸ್ತೆ ಬದಿಯಲ್ಲಿ ಮತ್ತು ಕಡಲ ತೀರ ಸೇರಿದಂತೆ ಮತ್ತಿತರ ಕಡೆ ಪ್ಲಾಸ್ಟಿಕ್ ಕಸದ ರಾಶಿ ಬಿದ್ದಿದ್ದು, ಬಿಡಾಡಿ ದನಗಳ ಹೊಟ್ಟೆ ಸೇರುತ್ತಿದೆ.

ಇನ್ನು ಓಂ, ಕುಡ್ಲೆ ಕಡಲ ತೀರಗಳಿಗೆ ತೆರಳುವ ಮಾರ್ಗದುದ್ದಕ್ಕೂ ಮತ್ತು ಆ ಭಾಗದ ಅರಣ್ಯ ಪ್ರದೇಶದಲ್ಲೂ ತ್ಯಾಜ್ಯಗಳನ್ನು ಹಾಕುತ್ತಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ಸ್ವಚ್ಛತಾ ಅಭಿಯಾನ ಎನ್ನುತ್ತಾ ಪೊರಕೆ ಹಿಡಿದು ಬಿಟ್ಟಿ ಪ್ರಚಾರ ಪಡೆದು ದೊಡ್ಡ ಕಾರ್ಯಕ್ರಮ ಆಯೋಜಿಸಿ ತಿಳುವಳಿಕೆ ನೀಡಲಾಗಿತ್ತು, ಆದರೂ ಯಾವುದೇ ಬದಲಾವಣೆಯಾಗದೆ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುವ ಪರಿಸ್ಥಿತಿ ಮುಂದುವರಿದಿದೆ.

ಜಿಲ್ಲೆಯಲ್ಲಿಯೇ ಮಾದರಿ ಎನ್ನುವಂತೆ ಕಸ ಸಂಸ್ಕರಣಾ ಘಟಕ ಸ್ಥಾಪಿಸಿದ ಗೋಕರ್ಣ ಗ್ರಾಮ ಪಂಚಾಯತ ಪ್ರತಿ ಮನೆಯಿಂದ ಹಸಿ ಹಾಗೂ ಒಣ ಕಸ ಸಂಗ್ರಹಿಸುತ್ತಿರುವುದು ನಾಮಕೆವಾಸ್ತೆ ಎನ್ನಲಾಗಿದೆ. ಇಲ್ಲಿನ ಪ್ರಮುಖ ಸ್ಥಳಗಳಲ್ಲಿ ( ಜನ ನಿಬಿಡ ) ಕಸದ ಬುಟ್ಟಿ ಇಡದೆ ಇರುವುದು ಎಲ್ಲೆಂದರಲ್ಲಿ ಕಸ ಬೀಳಲು ಕಾರಣವಾಗಿದೆ. ಜಿಲ್ಲಾ ಪಂಚಾಯತ ಸೂಚನೆ ಮೇರೆಗೆ ಸಾರ್ವಜನಿಕ ಸ್ಥಳದಲ್ಲಿನ ಕಸದ ತೊಟ್ಟಿಯನ್ನು ತೆಗೆಯಲಾಗಿದೆ ಎಂಬ ಉತ್ತರ ಗ್ರಾಮ ಪಂಚಾಯತ ನೀಡುತ್ತಿದೆ. ಇನ್ನು ಪ್ರವಾಸಿಗರು ಅಂಗಡಿಯಲ್ಲಿ ಕೊಂಡ ವಸ್ತುಗಳನ್ನ ಅಲ್ಲಿಯೇ ಬಿಚ್ಚಿ ತ್ಯಾಜ್ಯ ಎಸೆಯುವುದರ ಬದಲು ಮತ್ತೆಲ್ಲಿಯೂ ಹೋಗಿ ಪಡೆದ ಸಾಮಗ್ರಿ ಬಳಕೆ ಮಾಡುತ್ತಾರೆ. ಆ ವೇಳೆ ಕಸವನ್ನು ರಸ್ತೆ ಬದಿಯಲ್ಲಿ ಎಸೆಯುತ್ತಾರೆ. ಇನ್ನೊಂದೆಡೆ ಗ್ರಾಮ ಪಂಚಾಯತ ಕಸ ಸಂಗ್ರಹದ ವಾಹನ ಬರುವ ಸಮಯವನ್ನು ಕಾಯದೆ ಕೆಲವರು ತ್ಯಾಜ್ಯವನ್ನು ಮೂಟೆ ಕಟ್ಟಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಹೀಗೆ ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ಸಿ.ಸಿ. ಕ್ಯಾಮೆರಾ ಅಥವಾ ಇನ್ಯಾವುದಾದರೂ ವ್ಯವಸ್ಥೆ ಅಳವಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂಬ ಆಗ್ರಹವು ಕೇಳಿ ಬರುತ್ತಿದೆ.

ಇಲ್ಲಿನ ಬಹುತೇಕ ಮಾಂಸಾಹಾರಿ ಹಾಗೂ ಶಾಖಾಹಾರಿ ಹೊಟೇಲ್ ಗಳು ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದು, ಈ ಹೊಟೇಲ್ ಗಳ ಗಬ್ಬು ನಾರುವ ತ್ಯಾಜ್ಯಗಳನ್ನು ಬೇರೊಬ್ಬರ ಮನೆಯಂಗಳದಲ್ಲಿ ಎಸೆದು ವಿಕೃತಿ ಮೆರೆಯುವ ಜನರು ಇಲ್ಲಿದ್ದಾರೆ. ಇಂಥವರನ್ನು ಕಂಡು ಹಿಡಿದು ಕಾನೂನು ಕ್ರಮ ಕೈಗೊಂಡು ಶಿಕ್ಷಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಹುತೇಕ ಉದ್ಯೋಗಿಗಳು, ಕಾರ್ಮಿಕರು ಬಾಡಿಗೆ ಮನೆಯಲ್ಲಿ ವಾಸವಿದ್ದು,ತಮ್ಮ ಕೆಲಸ ಕಾರ್ಯಗಳಿಗೆ ತರಾತುರಿಯಲ್ಲಿ ತೆರಳುವ ಸಂದರ್ಭದಲ್ಲಿ ಕಸದ ವಾಹನಕ್ಕೆ ಕಾಯದೆ ರಸ್ತೆಯಲ್ಲಿ ಕಸದ ರಾಶಿ ಹಾಕಿ ತೆರೆಳುತ್ತಾರೆ ಎಂಬ ಮಾತು ಕೇಳಿ ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳು ಸಹ ಹರಿದಾಡಿವೆ. ಪ್ರವಾಸಿಗರಿರಲಿ, ಸ್ಥಳೀಯರೇ ಆಗಿರಲಿ ನಾವು ನಮ್ಮ ಮನೆಯ ಸ್ವಚ್ಛತೆಯಂತೆ ಹೊರ ಊರಿಗೆ ಹೋದಾಗ ಅಲ್ಲಿನ ಪರಿಸರದ ಬಗ್ಗೆ ಸ್ವಲ್ಪ ಕಾಳಜಿ ತೋರಬೇಕಿದೆ.

ಹನೇಹಳ್ಳಿ ರಸ್ತೆಯಲ್ಲಿ ತ್ಯಾಜ್ಯ

ಹನೇಹಳ್ಳಿ ಮತ್ತು ಗೋಕರ್ಣ ಗ್ರಾಮ ಪಂಚಾಯತ ಗಡಿಯ ಭಾಗವಾದ ಹನೇಹಳ್ಳಿ ಚರ್ಚ್ ನ ಹತ್ತಿರ ನಿರುಪಯೋಗಿ ವೈದ್ಯಕೀಯ ಪರಿಕರಗಳು ಮತ್ತು ತ್ಯಾಜ್ಯಗಳು, ಮೀನು ಮತ್ತು ಮಾಂಸದ ತ್ಯಾಜ್ಯಗಳು, ಮದ್ಯದ ಖಾಲಿ ಬಾಟಲು ಸೇರಿದಂತೆ ಅಪಾರ ಪ್ರಮಾಣದ ತಾಜ್ಯವನ್ನ ಹೊಟೇಲ್ ನವರು ರಾತ್ರಿ ಹೊತ್ತು ತಂದು ಎಸೆಯುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಸುಮಾರು ಒಂದು ಕಿ.ಮೀ. ದೂರದವರೆಗೆ ರಸ್ತೆಯ ಅಕ್ಕ ಪಕ್ಕದಲ್ಲಿ ಕಸ ತುಂಬಿ ತುಳುಕುತ್ತಿದ್ದು,ಇಲ್ಲಿ ಕಸ ಹಾಕದಂತೆ ನಾಮಫಲಕ ಹಾಕಿದರೂ ಆ ಫಲಕವೇ ಕಾಣದಂತೆ ಅದನ್ನೆ ಮುಚ್ಚಿ ಹಾಕಿ ಕಸದ ರಾಶಿಯನ್ನ ಸುರಿಯಲಾಗಿದೆ. ಇಲ್ಲಿ ಜನ ವಸತಿ ಅಷ್ಟಾಗಿ ಇರದ ಹಿನ್ನೆಲೆಯಲ್ಲಿ ತ್ಯಾಜ್ಯ ಎಸೆಯುವವರಿಗೆ ವರದಾನವಾಗಿದೆ. ಹಲವು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದ್ದು, ಎರಡು ಗ್ರಾಂ.ಪಂ.ಸೇರಿಕೊಂಡು ಏನಾದರೂ ತುರ್ತು ಕ್ರಮ ಕೈಗೊಳ್ಳಬೇಕಿದೆ.

ಒಟ್ಟಾರೆಯಾಗಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ಸೆಡ್ಡು ಹೊಡೆಯಲೆಂದೇ ಕೆಲವರು ಈ ವಿಕೃತಿ ಮೆರೆಯುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button