
ನವದೆಹಲಿ: ದೇಶ-ವಿದೇಶಗಳಲ್ಲಿ ಕೋವಿಡ್ ಮಹಾಮಾರಿ ಜನರನ್ನು ಕಾಡಲು ಶುರುವಾದ ನಂತರ ಆಯುರ್ವೇದ ಉತ್ಪನ್ನಗಳಿಗೆ ಭಾರಿ ಬೇಡಿಕೆ ಬಂದಿದೆ.ಸೌಂದರ್ಯ,ಆರೋಗ್ಯ ಕಾಪಾಡುವಂತಹ ಉತ್ಪನ್ನಗಳ ಮಾರಾಟ ದೇಶದಲ್ಲಿ ಮತ್ತು ವಿದೇಶಗಳಲ್ಲೂ ಹೆಚ್ಚಾಗಿದೆ. ಅದರಲ್ಲೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಯುರ್ವೇದ ಆಹಾರ ಉತ್ಪನ್ನಗಳು ಹಾಗೂ ವಿವಿಧ ಬಗೆಯ ಪಾನೀಯಗಳು ಮತ್ತು ಸೌಂದರ್ಯ ಹೆಚ್ಚಿಸುವ ಕಾಂತಿ ವರ್ಧಕ ಉತ್ಪನ್ನಗಳ ಮಾರಾಟ ಬಿಸಿ ದೋಸೆಯಂತೆ ನಡೆಯುತ್ತಿದೆ.
ಕಳೆದ 2018ರಲ್ಲಿ ಆಯುರ್ವೇದ ಉತ್ಪನ್ನಗಳ ಒಟ್ಟು ಮಾರಾಟದ ವಹಿವಾಟು 300 ಬಿಲಿಯನ್ ಡಾಲರ್ ನಷ್ಟು ತಲುಪಿದ್ದು, ಇದೆ ಬೇಡಿಕೆ ಸ್ಥಿತಿ ಮುಂದುವರಿದರೆ ಮುಂದಿನ 2024ರ ವೇಳೆಗೆ ವಹಿವಾಟು 700 ಬಿಲಿಯನ್ ಗೆ ಮುಟ್ಟುವ ಸಾಧ್ಯತೆಗಳಿವೆಯೆಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಅದರಲ್ಲೂ ಜಗತ್ತಿನಾದ್ಯಂತ ಕೋವಿಡ್ ಮಹಾಮಾರಿ ಜನರನ್ನು ಹಿಂಡಿಹಿಪ್ಪೆ ಮಾಡಿದ ನಂತರ ನಂತರ ಭಾರತೀಯ ಆಯುರ್ವೇದ ಉತ್ಪನ್ನಗಳಿಗೆ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸಹ ಬೇಡಿಕೆ ನಿರೀಕ್ಷೆಗಿಂತಲೂ ಹೆಚ್ಚಿದೆ.
