ಒಮಿಕ್ರಾನ್ ಹೆಚ್ಚಳ: ರಾಜ್ಯದಲ್ಲಿ ಕಠಿಣ ಕ್ರಮ ಕುರಿತು ನಾಳೆ ತಜ್ಞರ ಜೊತೆ ಸಭೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಗುರುವಾರದಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಟ್ಟಾರೆ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚೆ ಮಾಡಿ ದೀರ್ಘಾವಧಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಮತ್ತು ಒಮಿಕ್ರಾನ್ ವೈರಸ್ ವೇಗವಾಗಿ ದೇಶ ಹಾಗೂ ರಾಜ್ಯಗಳಲ್ಲಿ ಹರಡುತ್ತಿದೆ. ಈ ಬಗ್ಗೆ ತಜ್ಞರೊಂದಿಗೆ ನಾಳೆ ಸಂಜೆ ಸಭೆ ನಡೆಸಿ ಚರ್ಚಿಸಲಾಗುವುದು. ಹಿಂದೆ ಎರಡು ಅಲೆಗಳನ್ನು ನಿಭಾಯಿಸಿರುವ ಅನುಭವದ ಹಿನ್ನೆಲೆಯಲ್ಲಿ ಆದಷ್ಟೂ ಜನಜೀವನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕೊರೊನಾ ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಬಗ್ಗೆ ಸೂಚನೆ ನೀಡುವಂತೆ ತಜ್ಞರಿಗೆ ಸೂಚನೆ ನೀಡಲಾಗಿದೆ ಎಂದರು.
ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಕರ್ನಾಟಕದಲ್ಲಿ ಅತ್ಯಂತ ಯಶಸ್ವಿಯಾಗಿ ಕೋವಿಡ್ ನ್ನು ನಿಯಂತ್ರಣ ಮಾಡಲಾಯಿತು. ಔಷಧಿ, ಬೆಡ್, ಆಕ್ಸಿಜನ್, ಸಮಸ್ಯೆಗಳನ್ನು ನಿಭಾಯಿಸಿ, ಕರ್ನಾಟಕವನ್ನು ಸುರಕ್ಷಿತ ರಾಜ್ಯ ವನ್ನಾಗಿಸುಲು ಅವರು ತೆಗೆದುಕೊಂಡ ಕ್ರಮಗಳು ಕಾರಣ ಎಂದು ತಿಳಿಸಿದರು.
ನಮ್ಮ ಸರ್ಕಾರ ಕೋವಿಡ್ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಹೀಗಾಗಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೋವಿಡ್ ಕಡಿಮೆ ಇದೆ. ಸೂಕ್ತ ಕ್ರಮಗಳನ್ನು ತೆಗೆದುಕೊಂಡ ಕಾರಣ ಇದನ್ನು ಸಾಧಿಸಲಾಗಿದೆ. ವೈಜ್ಞಾನಿಕ ಚಿಂತನೆ ಮಾಡಬೇಕು. ಸರಿಯಾದ ಕಾರ್ಯಸೂತ್ರ ರೂಪಿಸಿ, ಜನರನ್ನು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕೋವಿಡ್ ಹರಡದಿರಲು ಗಂಭೀರ ಯೋಜನೆ:
ಆರೋಗ್ಯ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದ್ದು, ತಳಮಟ್ಟದಲ್ಲಿ ಆರೋಗ್ಯ ಮೂಲಸೌಕರ್ಯ ಹೆಚ್ಚಳವಾಗಿದೆ. ಮೂರನೇ ಅಲೆ ಎಂದು ಬಿಂಬಿತವಾಗಿರುವ ಒಮಿಕ್ರಾನ್ ನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲು ಗಡಿ ಭದ್ರತೆ, ಆರ್ಟಿಪಿಸಿಆರ್ ಕಡ್ಡಾಯ, ಎರಡು ಡೋಸ್ ಲಸಿಕೆಯಾಗಿರುವ ಬಗ್ಗೆ ಪರಿಶೀಲನೆ, ಸಂಪರ್ಕ ಪತ್ತೆ ಮಾಡುವ ಮೂಲಕ ಕ್ರಮ ಕೈಗೊಂಡಿದೆ. ಒಂದು ವಾರದಲ್ಲಿ ಪ್ರಕರಣಗಳು ಉಲ್ಬಣಗೊಂಡಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎರಡು ಅಲೆಗಳನ್ನು ನಿಭಾಯಿಸಿರುವ ಅನುಭವದ ಹಿನ್ನೆಲೆಯಲ್ಲಿ ಇದನ್ನು ವಿಭಿನ್ನವಾಗಿ ನಿಭಾಯಿಸಬೇಕಿದೆ. ಬೆಳೆಯುತ್ತಿರುವ ಆರ್ಥಿಕತೆಯನ್ನು ಗಮನಿಸಿ, ಕೋವಿಡ್ ಹರಡದಂತೆ ಮುನ್ನಡೆಯಬೇಕಿದೆ. ಈ ನಿಟ್ಟಿನಲ್ಲಿ ಗಂಭೀರ ಯೋಜನೆಗಳನ್ನು ರೂಪಿಸಲಾಗುವುದು. ಇದಕ್ಕೆ ಜನರ ಸಹಕಾರ ಅಗತ್ಯ. ಕರ್ನಾಟಕದ ಮಹಾಜನತೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಮನವಿ ಮಾಡಿದರು.
ಪ್ರಧಾನಮಂತ್ರಿಗಳ ಕ್ರಮ ವಿಶ್ವಕ್ಕೆ ಮಾದರಿ:
ಕೊರೊನಾ ಬಗ್ಗೆ ಏನೂ ತಿಳಿಯದಿದ್ದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅದನ್ನು ಮುಂಚೂಣಿಯಲ್ಲಿ ನಿಂತು ಅದು ಒಡ್ಡಿದ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ, ಇದರಿಂದ ಪರಿಣಾಮ ಹೊಂದಿದ ಆರ್ಥಿಕ ಹಿಂಜರಿತವನ್ನು ಅವರು ಕಾಲಕಾಲಕ್ಕೆ ತೆಗೆದುಕೊಂಡ ತೀರ್ಮಾನಗಳಿಂದ ವಿಶ್ವಕ್ಕೇ ಮಾದರಿಯಾಗಿವೆ. ಆತ್ಮನಿರ್ಭರ್ ಭಾರತ್, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ, ವಿಶೇಷವಾಗಿ ಆರೋಗ್ಯ ಕ್ಷೇತ್ರಕ್ಕೆ ಹಣಕಾಸಿನ ನೆರವು, ರಾಜ್ಯಗಳಿಗೆ ಕಾಲ ಕಾಲಕ್ಕೆ ಕೊಟ್ಟ ನಿರ್ದೇಶನಗಳು, ಮಾರ್ಗದರ್ಶನಗಳು, ಆರೋಗ್ಯ ಪರಿಣಿತರನ್ನು ಕಳಿಸಿ ಎಲ್ಲರಿಗೂ ಮನವರಿಕೆ, ಜನರನ್ನು ಇದರಲ್ಲಿ ತೊಡಗಿಸಿಸುವುದು ಹಾಗೂ ಲಸಿಕೆ ಉತ್ಪಾದನೆಗೆ ಪ್ರೋತ್ಸಾಹ, 140 ಕೋಟಿ ಜನರಿಗೆ ಲಸಿಕೆ ಹಾಕುವುದನ್ನು ಹಂತ ಹಂತವಾಗಿ ನಡೆಸಿ ಶೇ 97 ರಷ್ಟು ಜನರಿಗೆ ಲಸಿಕೆ ಪೂರೈಕೆ ಮಾಡಿರುವುದು ಒಂದು ದಾಖಲೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪಾದಯಾತ್ರೆ :
ಒಮಿಕ್ರಾನ್ ಭೀತಿಯ ನಡುವೆಯೂ ಕಾಂಗ್ರೆಸ್ ಪಾದಯಾತ್ರೆ ಕೈಗೊಳ್ಳುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಮಂತ್ರಿಗಳು, ಕಾಂಗ್ರೆಸ್ ನಡೆಯನ್ನು ಗಮಸಿಸುತ್ತಿದ್ದು, ಸಾರ್ವತ್ರಿಕ ನಡವಳಿಕೆಯ ಬಗ್ಗೆ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಗುವುದು ಎಂದರು.
